ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಕುಮಾರಕೃಪಾ(Kumara Krupa Guest House) ಅತಿಥಿ ಗೃಹಕ್ಕೆ ಗಂಗಾ(Ganga) ಎಂದು ಮರುನಾಮಕರಣ ಮಾಡಲಾಗಿದ್ದು, ಈಗಾಗಲೇ ನೂತನ ನಾಮಫಲಕವನ್ನು ಅಳವಡಿಸಲಾಗಿದೆ. ಸೋಮವಾರ ಮೊದಲ ಕಾರ್ತಿಕ ಸೋಮವಾರದ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿಗಳು ತಮ್ಮ ನೂತನ ನಿವಾಸಕ್ಕೆ ಗೃಹಪ್ರವೇಶ ಮಾಡಲಿದ್ದಾರೆ.
ಬೆಳಿಗ್ಗೆ ಉತ್ತಮ ಮುಹೂರ್ತ ಹಾಗೂ ಶುಭ ಗಳಿಗೆ ಇರುವ ಹಿನ್ನೆಲೆಯಲ್ಲಿ ಗೃಹಪ್ರವೇಶ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ನೂತನ ನಿವಾಸದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳು ಆರಂಭವಾಗಿವೆ. ಸದ್ಯ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರು ನೂತನ ನಿವಾಸದಲ್ಲೇ ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ.
ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂತನ ನಿವಾಸದ ಒಳಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಒಳಗೆ ಹೋಗಲು ಅನುಮತಿಯಿಲ್ಲ ಎಂದು ತಿಳಿಸಿರುವ ಪೊಲೀಸರು, ಮುಖ್ಯ ದ್ವಾರದ ಬಳಿಯೇ ಮಾಧ್ಯಮ ಪ್ರತಿನಿಧಿಗಳನ್ನು ತಡೆದಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಸೋಮವಾರ ಸಾಂಕೇತಿಕವಾಗಿ ಗೃಹಪ್ರವೇಶ ಹಾಗೂ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ನವೆಂಬರ್ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿಗಳ ಇಡೀ ಕುಟುಂಬವು ಸದಾಶಿವನಗರದ ನಿವಾಸದಿಂದ ‘ಗಂಗಾ’ ನಿವಾಸಕ್ಕೆ ಸಂಪೂರ್ಣವಾಗಿ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಸುಮಾರು 160 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ‘ಕುಮಾರಕೃಪಾʼ 1856ರಲ್ಲಿ ನಿರ್ಮಾಣವಾಗಿತ್ತು. ಕಲ್ಲಿನ ಕಟ್ಟಡವು ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ನಂತರ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರು ಇದನ್ನು ಸರ್ಕಾರದ ಆಸ್ತಿಯನ್ನಾಗಿ ಪರಿವರ್ತಿಸಿದರು.1927ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಇದೇ ಬಂಗಲೆಯಲ್ಲಿ ತಂಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರೂ ಇಲ್ಲಿ ವಾಸವಿದ್ದರು.
