ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಕೆರೆಗೆ ಉರುಳಿಬಿದ್ದಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಬಳಿ ನಡೆದಿದೆ.
ಬಾಗೇಪಲ್ಲಿಯಿಂದ ಚಿಂತಾಮಣಿಗೆ ತೆರಳುತ್ತಿದ್ದ ಕೆಎ 40 ಎಫ್ 701 ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಎದುರುಗಡೆಯಿಂದ ಬಂದ ಬೈಕ್ ತಪ್ಪಿಸಲು ಹೋಗಿ ಯಲ್ಲಂಪಲ್ಲಿ ಕೆರೆಗೆ ಜಾರಿಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್ಸಿನಲ್ಲಿ 25 ಜನರು ಪ್ರಯಾಣಿಕರಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ. ಪ್ರಯಾಣಿಕರನ್ನ ಸ್ಥಳೀಯ ಗ್ರಾಮಸ್ಥರು ಹಾಗೂ ದಾರಿ ಹೋಕರು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಬರಲು ಸಹಾಯ ಮಾಡಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡವರು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಳೇ ವೈಷಮ್ಯಕ್ಕೆ ಗ್ರಾ.ಪಂ ಉಪಾಧ್ಯಕ್ಷನ ಕೊಲೆ
ಮೊದಲೇ ಬಾಗೇಪಲ್ಲಿ ಹಾಗೂ ಚಿಂತಾಮಣಿ ಮಾರ್ಗದ ರಸ್ತೆ ಕಿರಿದಾಗಿದ್ದು, ಅದರಲ್ಲೂ ಕೆರೆ ಏರಿಗಳ ಬಳಿ ರಸ್ತೆ ಸಂಪೂರ್ಣ ಹಳ್ಳ ಕೊಳ್ಳಗಳಿಂದ ಕೂಡಿದೆ. ಕಳೆದ ರಾತ್ರಿ ಸಹ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆಯ ಏರಿಯ ಮೇಲೆ ಎದುರುಗಡೆ ಬಂದ ವಾಹನಕ್ಕೆ ಜಾಗ ಕೊಡಲು ಡಾಂಬರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಸಿದಾಗ ನಿಧಾನವಾಗಿ ಬಸ್ ಜಾರಿ ಕೆರೆಗೆ ಉರುಳಿದೆ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕೆರೆಯಲ್ಲಿ ಬಿದ್ದಿರೋ ಬಸ್ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಾಲಕ ಶಿವಕುಮಾರ್ ಅವರ ಕೈ ಹಾಗೂ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೂ ಈ ರಸ್ತೆ ಕಿರಿದಾಗಿರೋದು ಪದೇ ಪದೇ ಅಪಘಾತಗಳಿಗೂ ಕಾರಣವಾಗುತ್ತಿದ್ದು, ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ