ಮಂಡ್ಯ: ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ತಾಲೂಕಿನ ಜನರ ಕನಸನ್ನು ನನಸು ಮಾಡುವತ್ತ ಕೆಲಸಗಳನ್ನು ಆರಂಭಿಸುತ್ತೇನೆ ಎಂದು ಕೆ.ಆರ್.ಪೇಟೆಯಲ್ಲಿ ಗೆಲುವು ದಾಖಲಿಸಿರುವ ಬಿಜೆಪಿ ನಾರಾಯಣಗೌಡ ಹೇಳಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸ್ಪಲ್ಪ ಕೆಲಸ ಮಾಡಿದ್ದೇನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಮತ್ತು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಕ್ಷೇತ್ರದ ಜನತೆ ಮತ ನೀಡಿದ್ದಾರೆ. ಆದ್ದರಿಂದ ಗೆಲುವು ಲಭಿಸಿದೆ ಎಂದು ನಾರಾಯಣಗೌಡ ಮಾಧ್ಯಮಗಳ ಜೊತೆ ಸಂತೋಷ ಹಂಚಿಕೊಂಡರು.
ಇದೇ ವೇಳೆ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರತಿ ಕಾರ್ಯಕರ್ತರಿಗೂ ನಾರಾಯಣ ಗೌಡರು ಧನ್ಯವಾದ ಸಲ್ಲಿಸಿದರು.
ಕೆ.ಆರ್.ಪೇಟೆ ಅಖಾಡದಲ್ಲಿ ಬಿಜೆಪಿಗೆ ಜೆಡಿಎಸ್ ಭಾರೀ ಪೈಪೋಟಿ ನೀಡಿತ್ತು. ಎರಡು ಪಕ್ಷದ ಅಭ್ಯರ್ಥಿಗಳ ಮಧ್ಯೆ ಒಂದು ರೀತಿಯ ಹಾವು-ಏಣಿ ಆಟವೇ ನಡೆದಿತ್ತು. ಅಂತಿಮವಾಗಿ ಜೆಡಿಎಸ್ ನ ದೇವರಾಜು ಅವರನ್ನು ಸೋಲಿಸಿ ಗೆಲುವಿನ ಗುರಿಯನ್ನು ನಾರಾಯಣಗೌಡರು ತಲುಪಿದರು. ಇತ್ತ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.