ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇಡಿ ರೇಡ್ ಆಗ್ತಿದ್ದಂತೆಯೇ ಎಸ್ಕೇಪ್ ಆಗಿದ್ದ ಪರೀಕ್ಷಾ ನಿಯಂತ್ರಕ-ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಬೆಂಗಳೂರಿಗೆ ಬಂದಿದ್ದು, ಸಿಐಡಿ ವಿಚಾರಣೆ ಎದುರಿಸಿದ್ದಾರೆ.
ಶುಕ್ರವಾರ ಬೆಂಗಳೂರಿಗೆ (Bengaluru) ಬಂದ ಗ್ಯಾನೇಂದ್ರ ಅವರು ಸಿಐಡಿ ನೊಟೀಸ್ ಹಿನ್ನೆಲೆಯಲ್ಲಿ ಹಾಜರಾಗಿ ಸುದೀರ್ಘ ವಿಚಾರಣೆ ಎದುರಿಸಿದ್ದಾರೆ. ಸತತ 11 ಗಂಟೆಗಳ ಕಾಲ ಸಿಐಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.

ಈ ವೇಳೆ ಯಾವ ರೀತಿ ಪರೀಕ್ಷಾ ತಯಾರಿ ಆಗಿತ್ತು? ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿತ್ತು? ಪೇಪರ್ ಲೀಕ್ ಆಗಿರುವ ವಿಚಾರ ಯಾವಾಗ ಗೊತ್ತಾಗಿದ್ದು..? ಎಂದು ಸಿಐಡಿ ಅಧಿಕಾರಿಗಳು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನೀಡಿದ ಗ್ಯಾನೇಂದ್ರ ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.
ಇನ್ನು, ಗ್ಯಾನೇಂದ್ರ ಕುಮಾರ್ ಎಸ್ಕೇಪ್ ಆಗಿದ್ದರ ಹಿಂದೆ ಸರ್ಕಾರದ್ದೇ ಕೈವಾಡ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಗದಂತೆ ಮಾಡಿದ್ದೇ ರಾಜ್ಯ ಸರ್ಕಾರ ಅಂತ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಇನ್ನೊಂದೆಡೆ, ಕೆಪಿಎಸ್‌ಸಿ ಹಗರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಇದೆ. ಅವರು ರಾಜೀನಾಮೆ ಕೊಡ್ಬೇಕು ಅಂತ ಕೇಂದ್ರ ಸಚಿವ ಕುಮಾರಸ್ವಾಮಿ ದಾಖಲೆ ಸಮೇತ ಆರೋಪ ಮಾಡಿದ್ದಾರೆ.

2024ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ, ಗ್ಯಾಮೀಣಾಭಿವೃದ್ಧಿ ಇಲಾಖೆಯ ಎಇಇ ಹುದ್ದೆಯಲ್ಲಿ ಅಕ್ರಮ ಸಾಬೀತಾದ 24 ಅಭ್ಯರ್ಥಿಗಳಿಗೆ ತರಾತುರಿಯಲ್ಲಿ ನೇಮಕಾತಿ ಪತ್ರ ನೀಡಿದ್ದಾರೆ. ಅಭ್ಯರ್ಥಿಗಳ ಓಎಂಆರ್ ತಿದ್ದುಪಡಿ ಸೇರಿ ವಿವಿಧ ಹಂತದಲ್ಲಿ ಅಕ್ರಮ ಸಾಬೀತಾಗಿದೆ. ಅಕ್ರಮದಲ್ಲಿ ಅಂದಿನ ಕೆಪಿಎಸ್‌ಸಿ ಕಾರ್ಯದರ್ಶಿ ಶಾಮೀಲಾಗಿದ್ದಾರೆ. ಅಕ್ರಮ ತನಿಖೆಗೆ ಕೆಪಿಎಸ್‌ಸಿಯಿಂದ ಸಬ್ ಕಮಿಟಿ ನೇಮಕ ಮಾಡಲಾಗಿತ್ತು. ಈ ತನಿಖೆಯಲ್ಲಿ ಅಕ್ರಮ ಆಗಿರೋದು ಸಾಬೀತಾಗಿದೆ. ಸಬ್ ಕಮಿಟಿ ಶಿಫಾರಸು ಇಲ್ಲದೆ, ಆಯೋಗದ ಅನುಮತಿಯೂ ಇಲ್ಲದೆ, ಕಾರ್ಯದರ್ಶಿಗಳಿಂದ ಅಂತಿಮ ಪಟ್ಟಿ ಬಿಡುಗಡೆಗೆ ಒತ್ತಡ ಹೇರಿದ್ದಾರೆ ಅಂತ ಕುಮಾರಸ್ವಾಮಿ ದೂರಿದ್ದಾರೆ. ಹೆಚ್ಡಿಕೆ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ನಾನು ಬೇಕಾಯ್ತು ಅಂತ ವ್ಯಂಗ್ಯವಾಗಿದ್ದಾರೆ.
