ಹಾವೇರಿ: ಯಾರಾದರೂ ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಅಂದರೆ ಅದು ಅವರ ಸಂಸ್ಕೃತಿ ಬಿಂಬಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿ, ಕರಾವಳಿ ಭಾಗದಲ್ಲಿ ಕೆಲ ಸಂಘಟನೆಗಳಿಂದ ತಾಲಿಬಾನ್ ಮಾದರಿ ಸಂಸ್ಕೃತಿ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರೇನು ಹೇಳ್ತಾರೆ, ಇವರೇನು ಹೇಳ್ತಾರೆ ಅನ್ನೋದು ಯಾವುದೂ ಅಲ್ಲ. ಸಂವಿಧಾನ ಬದ್ಧವಾಗಿ ರಾಜ್ಯದ ಉಚ್ಚ ನ್ಯಾಯಾಲಯ ಸಮವಸ್ತ್ರ ಪಾಲಿಸಿ ಎಂದು ಹೇಳಿದೆ. ಅದನ್ನು ಪಾಲಿಸಬೇಕು ಅನ್ನೋದು ಸರ್ಕಾರದ ನಿಲುವಾಗಿದೆ. ಹೈಕೋರ್ಟ್ ತೀರ್ಪುನ್ನು ಮೀರಿ ಯಾರಾದರೂ ಹೇಳುತ್ತಾರೆ ಅಂದರೆ ಅವರಿಗೆ ಸಂವಿಧಾನದ ಮೇಲೆ ಇರುವ ಗೌರವವನ್ನು ಪ್ರಶ್ನಿಸುವ ಅನಿವಾರ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.
ಹೈಕೋರ್ಟ್ ಏನು ಹೇಳಿದೆ, ಅದಕ್ಕೆ ನಮ್ಮ ಬದ್ಧತೆ ಇದೆ. ಯಾರಾದರೂ ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡುತ್ತಾರೆ ಅಂದರೆ ಅದು ಅವರ ಸಂಸ್ಕೃತಿ ಬಿಂಬಿಸುತ್ತದೆ. ಸಂವಿಧಾನದ ಆಶಯದಂತೆ ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಸರ್ಕಾರ ಆದೇಶ ಕೊಟ್ಟಿದೆ. ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡಿದೆ ಎಂದರು. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ
ಕೆಲವರು ಮತೀಯವಾದ ಇಟ್ಟುಕೊಂಡು ರಾಷ್ಟ್ರೀಯವಾದಕ್ಕೆ ಸವಾಲು ಹಾಕುವಂತಹ ವಿಚಾರ ತಾವೆಲ್ಲಾ ಕೇಳಿದ್ದೀರಿ. ಇದನ್ನು ಸ್ಪಷ್ಟವಾಗಿ ನಿಯಂತ್ರಣಕ್ಕೆ ತರುತ್ತೇವೆ. ಯಾರೂ ಕೂಡಾ ಕಾನೂನಿಗಿಂತ ಮೇಲಲ್ಲ. ನಮ್ಮ ವ್ಯವಸ್ಥೆಗಳು, ಆಚರಣೆಗಳು, ಆಲೋಚನೆಗಳು, ನಂಬಿಕೆಗಳು ನಮ್ಮ ಚೌಕಟ್ಟಿನಲ್ಲಿ ಸಾಂಪ್ರದಾಯಿಕವಾಗಿ, ಖಾಸಗಿಯಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ. ಇದನ್ನು ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಕಾನೂನಿಗೆ ಪೂರಕವಾದ ವಾತಾವಣವನ್ನು ಒದಗಿಸುತ್ತೇವೆ. ಕಾನೂನಿಗೆ ಸೆಡ್ಡು ಹೊಡೆಯುವವರನ್ನು ನಿಯಂತ್ರಣ ಮಾಡುವ ಅಧಿಕಾರ ಇದೆ. ಅದನ್ನೂ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ಸಿಎಂ ಆಗಿದ್ದಕ್ಕೆ ರಾಜ್ ಠಾಕ್ರೆಗೆ ಧ್ವನಿವರ್ಧಕಗಳ ಸಮಸ್ಯೆ: ಸಂಜಯ್ ರಾವತ್



