– ಕೇರಳದಿಂದ ಬಂದವರು ಕರ್ನಾಟಕದಲ್ಲಿ ದರ್ಬಾರ್ ಮಾಡೋದೇಕೆ ಅಂತ ವ್ಯಾಪಕ ಟೀಕೆ
ಬೆಂಗಳೂರು: ಇಲ್ಲಿನ ಕೋಗಿಲು ಲೇಔಟ್ (Kogilu Layout) ಬಳಿ ಅಕ್ರಮ ನಿವಾಸಿಗಳ ತೆರವುಗೊಳಿಸಿ ಮನೆಗಳನ್ನು ಜಿಬಿಎ ಧ್ವಂಸಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಕೇರಳ ರಾಜಕೀಯ ಮಾಡುತ್ತಿದೆ. ಜಿಬಿಎ ಕಾರ್ಯಾಚರಣೆ ನಡೆಸಿದ ಸ್ಥಳಕ್ಕೆ ಕೇರಳ ಸಂಸದ, ಶಾಸಕರು ಭೇಟಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕೇರಳ ದರ್ಬಾರ್ ಜೋರಾಗಿದೆ. ಪದೇ ಪದೇ ಕರ್ನಾಟಕದ ವಿಷಯಗಳಿಗೆ ಕೇರಳ ಮೂಗು ತೂರಿಸುತ್ತಿದೆ. ಅನವಶ್ಯಕವಾಗಿ ಕರ್ನಾಟಕದ ವಿಷಯಕ್ಕೆ ಕೇರಳ ಸಿಎಂ ಮೂಗು ತೂರಿಸಿ ರಾಜಕಾರಣ ಮಾಡುತ್ತಿದ್ದಾರೆ. ಕೇರಳ ಚುನಾವಣೆಯ ಲೆಕ್ಕಚಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕರ್ನಾಟಕದ ತೀರ್ಮಾನಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಕೋಗಿಲು ಲೇಔಟ್ ಅಕ್ರಮ ಮನೆ ತೆರವುದಾರರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ದೆಹಲಿಯ ಕೇರಳ ಮೂಲದ ನಾಯಕರಿಂದ ರಾಜ್ಯ ಸರ್ಕಾರ ಮೇಲೆ ಒತ್ತಡ ಹೆಚ್ಚಾಗಿದೆ. ರಾಜ್ಯ ಸರ್ಕಾರದ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದ್ದರೂ ಕೇರಳ ಕಾಂಗ್ರೆಸ್‌ಗೆ ತೀವ್ರ ಮುಜುಗರ ಸೃಷ್ಟಿ ಆಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಎಂಟ್ರಿಯಿಂದ ರಾಜಕೀಯ ಜಟಾಪಟಿಗೆ ತಿರುಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಧ್ಯಪ್ರವೇಶಿಸಿದ್ದಾರೆ. ಸಿಎಂ, ಡಿಸಿಎಂ ಜೊತೆ ಮಾತುಕತೆ ನಡೆಸಿರುವ ವೇಣುಗೋಪಾಲ್, ಮಾನವೀಯತೆ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಇದು ಅಕ್ರಮ ಅಂತ ತಿಳಿಸಿದರೂ, ವೇಣುಗೋಪಾಲ್ ಆರ್ಡರ್ ಪಾಲಿಸಬೇಕಾ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಚುನಾವಣೆ ವೇಳೆ ಪಿಣರಾಯಿ ರಾಜಕೀಯ ಗಿಮಿಕ್ ಮಾಡೋದು ಬೇಡ: ಡಿಕೆಶಿ ಕಿಡಿ
ಅಂದು ಸಂಸದೆ ಪ್ರಿಯಾಂಕಾ ಗಾಂಧಿ, ಇಂದು ಕೆ.ಸಿ.ವೇಣುಗೋಪಾಲ್ ಆರ್ಡರ್ ಮಾಡಲು ಹೊರಟಿದ್ದಾರಾ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೇರಳ ರಾಜಕಾರಣಕ್ಕೆ ಪದೇ ಪದೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಳಕೆ ಆಗುತ್ತಿದೆ. ಮಾನವೀಯತೆ ಕಾರ್ಡ್ ಪ್ಲೇ ಮಾಡಿ ಕರ್ನಾಟಕ ಸರ್ಕಾರದಿಂದ ಸಹಾಯ ಕೇಳುತ್ತಿರುವುದು ವಿಪರ್ಯಾಸ ಎಂಬ ಟೀಕೆಗಳು ವ್ಯಕ್ತವಾಗಿವೆ. ವಯನಾಡು ಪ್ರವಾಹಕ್ಕೆ ಕರ್ನಾಟಕ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಹಣ ಕೊಟ್ಟರು. ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟರೆ ಕರ್ನಾಟಕ ಸರ್ಕಾರದಿಂದ ಪರಿಹಾರ ಕೊಟ್ಟರು. ಈಗ ಕರ್ನಾಟಕದಲ್ಲಿ ಬೆಂಗಳೂರಿನ ಕೋಗಿಲು ಲೇಔಟ್ ಅಕ್ರಮವಾಸಿಗಳಿಗೆ ಸಹಾಯಕ್ಕೆ ವೇಣುಗೋಪಾಲ್ ಸೂಚಿಸಿದ್ದಾರೆ. ಈ ನಡುವೆ ನಿನ್ನೆಯಷ್ಟೇ ಕೇರಳದ ಸಂಸದ ಎ.ಎ.ರಹೀಂ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇಂದು ಕೇರಳ ಸರ್ಕಾರದ ಮಾಜಿ ಸಚಿವ, ಶಾಸಕ ಜಲೀಲ್ (K.T.Jaleel) ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಸಿ.ಎಂ. ಇಬ್ರಾಹಿಂ ಕೂಡ ತೆರವು ಸ್ಥಳಕ್ಕೆ ಭೇಟಿ ನೀಡಿ, ಈ ವಿಷಯಕ್ಕೆ ಮತ್ತೊಂದು ರಾಜಕೀಯ ಆಯಾಮವನ್ನು ಸೇರಿಸಿದ್ದಾರೆ. ಅವರ ಉಪಸ್ಥಿತಿಯು ಕೇರಳ ನಿಯೋಗದ ಭೇಟಿಯೊಂದಿಗೆ ಹೊಂದಿಕೆಯಾಯಿತು.

