ಮಡಿಕೇರಿ: ಕ್ರೀಡೆಯ ತವರೂರು ಎಂದೇ ಖ್ಯಾತಿ ಪಡೆದಿರುವ ಕೊಡಗು(Kodagu) ಜಿಲ್ಲೆಗೆ ಇದೀಗ ಮತ್ತೊಂದು ಗರಿ ಸೇರುವ ಕ್ಷಣ ಸಮೀಪಿಸಿದೆ. ಯುವ ಪ್ರತಿಭೆಗಳು ರಾಷ್ಟ್ರಮಟ್ಟದ ತರಬೇತಿ ಪಡೆಯಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಬೇಕಿದ್ದ ಪರಿಸ್ಥಿತಿ ಇನ್ನು ಬದಲಾಗುವ ನಿರೀಕ್ಷೆ ಮೂಡಿದೆ. ವೀರಾಜಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾ ವಸತಿ ಸಮುಚ್ಚಯ (Sports complex)ಇದೀಗ ಗಮನ ಸೆಳೆಯುತ್ತಿದೆ.
ದೇಶಕ್ಕೆ ಅನೇಕ ಕ್ರೀಡಾಪಟುಗಳನ್ನು ನೀಡಿರುವ ಕೊಡಗು ಜಿಲ್ಲೆ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವೀರಾಜಪೇಟೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕ್ರೀಡಾ ವಸತಿ ಸಮುಚ್ಚಯ ಯುವ ಕ್ರೀಡಾಪಟುಗಳ ಕನಸಿನ ತಾಣವಾಗುತ್ತಿದೆ. ಸುಮಾರು 11.50 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಮುಚ್ಚಯಕ್ಕೆ ಆರಂಭಿಕ ಹಂತದಲ್ಲೇ 45 ಕೋಟಿ ರೂಪಾಯಿ ಅನುದಾನ ಮೀಸಲಾಗಿದ್ದು, ಕಾಮಗಾರಿ ವೇಗವಾಗಿ ಸಾಗುತ್ತಿದೆ. 
ಕ್ರೀಡಾಪಟುಗಳಿಗೆ ಒಂದೇ ಸೂರಿನಡಿ ತರಬೇತಿ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆಧುನಿಕ ಕ್ರೀಡಾಂಗಣ, ಒಳಾಂಗಣ ಕ್ರೀಡಾ ಸೌಲಭ್ಯಗಳು, ಜಿಮ್, ಈಜುಕೊಳ ಸೇರಿದಂತೆ ರಾಷ್ಟ್ರಮಟ್ಟದ ಗುಣಮಟ್ಟದ ವ್ಯವಸ್ಥೆ ನಿರ್ಮಾಣವಾಗುತ್ತಿದ್ದು, ಇದಕ್ಕೆ ಕೊಡಗಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ಉತ್ತಮ ತರಬೇತಿಗಾಗಿ ಕೊಡಗಿನ ಕ್ರೀಡಾಪಟುಗಳು ಹೊರ ರಾಜ್ಯಗಳತ್ತ ಮುಖ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಜಿಲ್ಲೆಯಲ್ಲೇ ಉನ್ನತ ಮಟ್ಟದ ತರಬೇತಿ ಮತ್ತು ಸೌಲಭ್ಯಗಳು ದೊರೆಯುವ ನಿರೀಕ್ಷೆ ಮೂಡಿದೆ. 
ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಜಾಗತಿಕ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಆರೋಗ್ಯ ಸಮಸ್ಯೆಗಳು ಎದುರಾದರೆ, ಇಲ್ಲಿಯೇ ಚಿಕಿತ್ಸೆ ನೀಡುವ ಸೌಲಭ್ಯವನ್ನೂ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.ಇದನ್ನೂ ಓದಿ: ನನ್ನ ರಾಜಕೀಯ ಮುಗಿಯಿತು.. ನೀವು ಮೈ ಮರೆತರೆ ನಿಮ್ಮ ರಾಜಕೀಯದ ಮಾರಣಹೋಮ ನಿಶ್ಚಿತ: ಸಿದ್ದರಾಮಯ್ಯ
ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದಲೂ ಯೋಜನೆಗೆ ಅನುದಾನ ಹರಿದುಬರುತ್ತಿದ್ದು, ರಾಜ್ಯ ಸರ್ಕಾರವೂ ವಿಶೇಷ ಅನುದಾನ ನೀಡಿದೆ.

ಒಟ್ಟಿನಲ್ಲಿ, ಕ್ರೀಡೆಗೆ ಹೆಸರಾಗಿರುವ ಕೊಡಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ಎಲ್ಲರಲ್ಲೂ ಮೂಡಿಸಿದೆ.ಇದನ್ನೂ ಓದಿ: ನಾಟಿ ಕೋಳಿ, ಮುದ್ದೆ, ಚಿಕನ್ ಚಾಪ್ಸ್ – ಬಾಯಿ ಚಪ್ಪರಿಸಿ ತಿಂದ ಸಿದ್ರಾಮಯ್ಯ
