ಕೊಡಗು: ಮಹಾಮಳೆಗೆ ಮಂಜಿನ ನಗರಿ ಜನ ಅಕ್ಷರಶಃ ತತ್ತರಿಸಿದ್ದಾರೆ. ಮರಣ ಮಳೆಗೆ ಈವರೆಗೆ 9 ಮಂದಿ ಸಾವನ್ನಪ್ಪಿದ್ದು, ಹಲವರು ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹಲವೆಡೆ ಗ್ರಾಮಕ್ಕೆ ಗ್ರಾಮವೇ ಕಣ್ಮರೆಯಾಗಿದೆ. ಮುಕ್ಕೊಡ್ಲುವಿನ 70ಕ್ಕೂ ಜನರು ತಮ್ಮ ಜೀವ ರಕ್ಷಣೆಗಾಗಿ ಬೆಟ್ಟ ಹತ್ತಿ ಕೂತಿದ್ದಾರೆ. ಹಲವೆಡೆ ಜನ ಬೆಟ್ಟ ಹತ್ತುತ್ತಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಮುಕ್ಕೋಡ್ಲುವಿನಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಒಂದು ಕಡೆ ಮತ್ತೆ ಮಳೆ ಆರ್ಭಟ, ಇನ್ನೊಂದು ಕಡೆ ಗುಡ್ಡ ಕುಸಿತ ಭೀತಿಯಿಂದ ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದಾರೆ.
ರಕ್ಕಸ ಮಳೆ ಕೊಡವರ ನಾಡನ್ನು ಇಂಚಿಂಚಾಗಿ ನುಂಗುತ್ತಿದೆ. ನೋಡನೋಡುತ್ತಿದ್ದಂತೆ ಗುಡ್ಡಗಳು ಕುಸಿಯುತ್ತಿದೆ. ಬೆಟ್ಟದಿಂದ ಕುಸಿದ ಮಣ್ಣು ನದಿಯಂತೆ ಹರಿಯುತ್ತಿದೆ. ಗುಡ್ಡದೊಂದಿಗೆ ರಸ್ತೆಗಳು ಸಹ ಧರಾಶಾಹಿಯಾಗಿದೆ. ಮಹಾಮಳೆಗೆ ಹಟ್ಟಿಹೊಳೆ ಎಂಬ ಊರು ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಕ್ಕಿ ಹೊಳೆ ಗ್ರಾಮ ಜಲಾವೃತಗೊಂಡಿದ್ದು, ಜನರೆಲ್ಲಾ ಊರು ಬಿಟ್ಟಿದ್ದಾರೆ. ಇತ್ತ 900ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಬರೋಬ್ಬರಿ 123 ಕಿಲೋಮೀಟರ್ ರಸ್ತೆಗಳೇ ನಾಪತ್ತೆಯಾಗಿದೆ. ಇತ್ತ ಬರೋಬ್ಬರಿ 58 ಸೇತುವೆಗಳು ನಾಶಗೊಂಡಿವೆ ಎಂಬ ಅಂಕಿ ಅಂಶಗಳು ಲಭ್ಯವಾಗಿದೆ.
3,800 ಲೈಟ್ ಕಂಬಗಳು ಹಾಳಾಗಿದ್ದು, 278 ಸರ್ಕಾರಿ ಕಟ್ಟಡಗಳು ಕುಸಿದುಬಿದ್ದಿವೆ. 3601 ಜನರ ರಕ್ಷಣೆ ಮಾಡಲಾಗಿದ್ದು, ಕೊಡಗಿನ 36 ಕ್ಯಾಂಪ್‍ಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 9 ರಕ್ಷಣಾ ಕೇಂದ್ರದಲ್ಲಿ ಒಟ್ಟು 802 ಮಂದಿ ಆಶ್ರಯ ಪಡೆದಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ಮಡಿಕೇರಿ ಸೇರಿ 10ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಲ್ಲಿ ಜನ ಆಶ್ರಯ ಪಡೆದಿದ್ದಾರೆ. ಮನೆಯನ್ನು ಕಳೆದುಕೊಂಡವರು ಕಣ್ಣೀರಿಡುತ್ತಾ ಕಾಲಕಳೆಯುತ್ತಿದ್ದಾರೆ. ಒಂದು ಮನೆ ಕೊಡಿ ಎಂದು ನಿರಾಶ್ರಿತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಕೊಡಗಿನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟು ಕಂದಕ ಸೃಷ್ಟಿಯಾಗಿದೆ. ಪರಿಣಾಮ ಈ ಮಾರ್ಗದ ಸಂಚಾರ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv