– ಕೇವಲ 24 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು
ರಾಯಚೂರು: ಹಾಡಹಗಲೇ ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಕೇವಲ 24 ಗಂಟೆಯೊಳಗೆ ಪ್ರಕರಣವನ್ನು ಬೇಧಿಸಿದ್ದಾರೆ.
ನಾಲ್ವರು ಅಪಹರಣಕಾರರು ಸೇರಿ ಒಟ್ಟು ಐವರನ್ನು ಬಂಧಿಸಲಾಗಿದ್ದು, ಸಿಂಧಗಿ ಮೂಲದ ಚಂದನಸಾಬ್, ರಮೇಶ್, ಸಂತೋಷ್, ಮಿರಾಜ್ ಮತ್ತು ಶಬ್ಬೀರ್ ಬಂಧಿತ ಆರೋಪಿಗಳಾಗಿದ್ದಾರೆ. ಎಸ್‍ಪಿ ವೇದಮೂರ್ತಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದ ಶರಣಪ್ಪ ಎಂಬವರನ್ನು ರಕ್ಷಿಸಿದ್ದಾರೆ.
ಶರಣಪ್ಪರ ದೊಡ್ಡಪ್ಪನ ಮಗ ಕೃಷ್ಣ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಸಿಂಧಗಿ ಮೂಲದ ನಾಲ್ವರಿಂದ ಹಣ ಪಡೆದಿದ್ದ. ಹಣ ಪಡೆಯುವಾಗ ಶರಣಪ್ಪ ಸಹ ಹಾಜರಿದ್ದ. ಕೃಷ್ಣ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆದೊಯ್ಯದೆ, ಹಣವನ್ನೂ ಮರಳಿ ನೀಡದೆ ತಲೆ ಮರೆಸಿಕೊಂಡಿದ್ದ. ಹೀಗಾಗಿ ಶನಿವಾರ ಮಧ್ಯಾಹ್ನ ಕಾರಲ್ಲಿ ಬಂದ ನಾಲ್ವರು ಲಿಂಗಸಗೂರನಲ್ಲಿ ಶರಣಪ್ಪ ಅವರನ್ನು ಬಲವಂತವಾಗಿ ಕರೆದೊಯ್ದಿದ್ದರು. ಅಪಹರಣ ತಡೆಯಲು ಯತ್ನಿಸಿದ್ದ ಸ್ಥಳೀಯರಿಗೂ ಪಿಸ್ತೂಲ್ ತೋರಿಸಿ ಆರೋಪಿಗಳು ಅಪಹರಿಸಿದ್ದರು.
ಘಟನೆ ನಡೆಯುತ್ತಿದ್ದಂತೆಯೇ ಎಸ್ಪಿ ವೇದಮೂರ್ತಿ ಅವರು ಎಸ್ಪಿ ಹರಿಬಾಬು ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಪ್ರಕರಣ ನಡೆದು 24 ಗಂಟೆಯೊಳಗೆ ರಾಯಚೂರು ಪೊಲೀಸರ ವಿಶೇಷ ಪ್ರಕರಣ ಬೇಧಿಸಿದ್ದು, ಅಪಹರಣಕ್ಕೊಳಗಾದ ಶರಣಪ್ಪ ಅವರನ್ನು ಸುರಕ್ಷಿತವಾಗಿ ರಾಯಚೂರಿಗೆ ಕರೆತಂದಿದ್ದಾರೆ. ಇದೀಗ ನಾಲ್ವರು ಅಪಹರಣಕಾರರು ಮತ್ತು ತೋಟದ ಮನೆಯಲ್ಲಿ ಕಾವಲು ಕಾಯುತ್ತಿದ್ದ ಓರ್ವ ಸೇರಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಲಿಂಗಸಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಡೆದಿದ್ದೇನು..?
ಶನಿವಾರ ಹಾಡಹಗಲೇ ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಬಳಿ ಸ್ನೇಹಿತರಂತೆ ಶರಣಪ್ಪರನ್ನು ಮಾತನಾಡಿಸಿದ್ದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಅಪಹರಣ ಮಾಡಿದ್ದರು. ಎಂಎಚ್ 14, 3566 ನಂಬರ್ ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ಶರಣಪ್ಪರನ್ನು ಸ್ನೇಹಿತರಂತೆ ಮಾತನಾಡಿಸಿದ್ದರು. ಬಳಿಕ ಆತನ ಹೆಗಲ ಮೇಲೆ ಕೈ ಹಾಕಿ ಕಾರಿನ ಬಳಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ದುಷ್ಕರ್ಮಿಗಳ ಸಂಚು ತಿಳಿಯುತ್ತಿದಂತೆಯೇ ಶರಣಪ್ಪ ರಕ್ಷಣೆಗೆ ಕೂಗಿಕೊಂಡಿದ್ದರು.
ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಕೂಡಲೇ ರಕ್ಷಣೆಗೆ ಮುಂದಾಗಿದ್ದರು. ಆದರೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ಮತ್ತೊಬ್ಬ ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸಿ ಸಾರ್ವಜನಿಕರನ್ನು ಹೆದರಿಸಿದ್ದ. ಪಿಸ್ತೂಲ್ ಕಂಡ ಸಾರ್ವಜನಿಕರು ಏನು ಮಾಡಲಾಗದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಶರಣಪ್ಪ ಕಾರನ್ನು ಹತ್ತಲು ನಿರಾಕರಿಸಿ ಸ್ಥಳದಲ್ಲಿ ರಂಪಾಟ ನಡೆಸಿದ್ದ. ಆದರೂ ಬಿಡದ ದುಷ್ಕರ್ಮಿಗಳು ಬಲವಂತವಾಗಿ ಕಾರಿಗೆ ಎತ್ತಿಹಾಕಿ ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಹಣಕಾಸಿನ ವಿಚಾರದಲ್ಲಿ ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ನಡುವೆ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿಸಿದ್ದರು.