– ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತ 1,902 ಕೋಟಿ ಬಿಡುಗಡೆಗೂ ಮನವಿ
ನವದೆಹಲಿ: ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 5,167 ಮೆಟ್ರಿಕ್ ಟನ್ ಭತ್ತ ಖರೀದಿಸಿದೆ. ಇದಕ್ಕೆ ತಗುಲುವ ವೆಚ್ಚ 4,422 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರಿಗೆ ಮನವಿ ಮಾಡಿದ್ದೇನೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ತಿಳಿಸಿದ್ದಾರೆ.
ದೆಹಲಿಯಲ್ಲಿ ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್ ಮುನಿಯಪ್ಪ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಪ್ರಹ್ಲಾದ್ ಜೋಶಿ ಅವರನ್ನ ಭೇಟಿಯಾಗಿದ್ದೇನೆ. ಇಲಾಖೆಯಲ್ಲಿ 1,902 ಕೋಟಿ ಬಾಕಿ ಮೊತ್ತ ಇದೆ. 2009-10 ರಿಂದ ಹಣ ಬರಬೇಕಿದೆ, ಅದನ್ನು ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ, 5,167 ಮೆಟ್ರಿಕ್ ಟನ್ ಭತ್ತ ಖರೀದಿಸಿದೆ. ಇದಕ್ಕೆ 4 ಸಾವಿರದ 422 ಕೋಟಿ ಬಿಡುಗಡೆ ಮಾಡಬೇಕಿದೆ. ಈ ಬಗ್ಗೆಯೂ ಮನವಿ ಮಾಡಲಾಗಿದೆ. 190 ಕೋಟಿ ಇತ್ತಿಚೆಗೆ ಬಿಡುಗಡೆ ಮಾಡಿದ್ದಾರೆ. ಬಾಕಿಮೊತ್ತದ ಹಣ ಕೂಡ ಕೊಡ್ತಿವಿ ಅಂದಿದ್ದಾರೆ. ಆಡಿಟ್ ವರದಿ ಕೊಟ್ಟಿದ್ದೇವೆ, ಬಾಕಿ ಮೊತ್ತ ಬಿಡುಗಡೆ ಮಾಡ್ತಿವಿ ಅಂದಿದ್ದಾರೆ. ಈ ವಾರದಲ್ಲಿ ಒಂದಷ್ಟು ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ರೈತರಿಗೆ 4,400 ಕೋಟಿ ಕೊಡಬೇಕು
ಅಲ್ಲದೇ 4 ಸಾವಿರದ 400 ಕೋಟಿ ರೈತರಿಗೆ ಕೊಡಬೇಕಿದೆ. ಇದು ಕೇಂದ್ರ ಸರ್ಕಾರ ಕೊಡಬೇಕಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾಲದಲ್ಲಿ ಡಿಬಿಟಿ ಮೂಲಕ ಸಂದಾಯ ಮಾಡಿದ್ದೀವಿ. ತದನಂತರ ಅಕ್ಕಿ ಕೊಡುವ ತೀರ್ಮಾನ ಆಯ್ತು. ಒಟ್ಟು 10 ಕೆಜಿ ಕೋಡಲಾಗುತ್ತಿದೆ. 10% ಬಾಕಿ ಮೊತ್ತ ನೀಡಿ ಅಂತಾ ಮನವಿ ಮಾಡಿದ್ದೇವೆ. ಸದ್ಯಕ್ಕೆ 375 ಕೋಟಿ ಬಿಡುಗಡೆ ಮಾಡ್ತಾ ಇದ್ದಾರೆ ಎಂದು ವಿವರಿಸಿದ್ದಾರೆ.
ಇಂದಿರಾ ಕಿಟ್ ಫೈನಲ್
ಅಲ್ಲದೇ 5 ಕೆಜಿ ಅಕ್ಕಿಗೆ ಬದಲಾಗಿ ʻಇಂದಿರಾ ಕಿಟ್ʼ ಕೊಡೋದು ಅಂತಿಮ ಆಗಿದೆ. ಟೆಂಡರ್ ಕೂಡ ಫೈನಲ್ ಹಂತಕ್ಕೆ ಬಂದಿದೆ. ಇದರೊಂದಿಗೆ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ ಕೊಡುವ ಕೆಲಸ ಮಾಡುತ್ತೇವೆ. ಸಾರ್ವಜನಿಕರ ಅಭಿಪ್ರಾಯದಂತೆ ಅಕ್ಕಿ ಹೆಚ್ಚುವರಿ ಬಗ್ಗೆ ಕಾಳಸಂತೆಗೆ ಹೋಗುವುದನ್ನ ತಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
