ಇದೇನಿದು ವಾಹನಗಳ ಮೇಲೆ ಬರೆಯುವ ಸಾಲನ್ನು ಹೇಳ್ತಿದಿನಿ ಅಂತ ಆಶ್ಚರ್ಯಾನಾ! ಹೌದು ಅಪಘಾತದಿಂದ ಪಾರಾಗಲು ಹಿಂಬದಿಯ ಚಾಲಕನಿಗೆ ಇದೊಂದು ಸಣ್ಣ ಸೂಚನೆ! ಹಾಗೇ ನಮ್ಮ ಬದುಕಿಗೂ (Life) ಸಹ ಎಷ್ಟೋ ಬೇಡದ ವಿಚಾರಕ್ಕೆ ನಡೆವ ಘರ್ಷಣೆಗಳಿಂದ ಪಾರಾಗಲು ಈ ಸಾಲು ಅಲಿಖಿತ ನಿಯಮ!
ನಾನು ಯಾಕೆ ಈ ಮಾತನ್ನು ಹೇಳ್ತಿದಿನಿ ಗೊತ್ತಾ? ನನಗೆ ಕೈಗೆ ಸಿಗದ, ಕಣ್ಣಿಗೆ ಕಾಣದ ಮನಸ್ಸಿನ (Mind) ಬಗ್ಗೆ ಎಲ್ಲಿಲ್ಲದ ಆಸಕ್ತಿ, ಎಲ್ಲಿಲ್ಲದ ಕುತೂಹಲ! ಅದೇ ಕಾರಣಕ್ಕೆ ಮನಸ್ಸಿಗೆ ಹಾನಿ ಉಂಟು ಮಾಡುವ ʻಅನಗತ್ಯ ವಿಚಾರಗಳಿಂದʼ ಉಂಟಾಗುವ ಕಿರಿಕಿರಿ ಬಗ್ಗೆ ಬರೆದು ಬಿಡೋಣ ಅಂತ ಕುಳಿತೆ. ಹೌದು ಕೆಲವೊಮ್ಮೆ ನಮಗೆ ಬೇಡದ ವಿಚಾರಗಳು, ವ್ಯಕ್ತಿಗಳು ನಮಗೆ ಅರಿವಿಗೆ ಬಾರದ ಹಾಗೆ ನೊಣದಂತೆ ಬಂದು ಮನಸ್ಸಿನ ಮೇಲೆ ಕುಳಿತು ಕಿರಿಕಿರಿ ಉಂಟು ಮಾಡುತ್ತಿರುತ್ತವೆ. ಇವುಗಳಿಂದ ಪಾರಾಗಲು ಒಂದಷ್ಟು ಸಲಹೆಗಳನ್ನು ನಾನಿಲ್ಲಿ ಚರ್ಚಿಸಿದ್ದೇನೆ ಅಷ್ಟೇ.
Advertisement
Advertisement
ಅನಗತ್ಯ ವಿಚಾರ, ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವ ಅಗತ್ಯವೇನು?
ಒಂದು ಕಲ್ಲಿನಿಂದ ಹೇಗೆ ಅನಗತ್ಯ ಭಾಗಗಳನ್ನು ತೆಗೆದಾಗ ಒಂದು ಸುಂದರ ಶಿಲ್ಪ ತಯಾರಾಗುತ್ತದೆಯೋ ಹಾಗೇ ನಮ್ಮ ಬದುಕಲ್ಲಿ ಹಾಗೂ ಮನಸ್ಸಲ್ಲಿ ಅನಗತ್ಯ ವಿಚಾರಗಳಿಂದ ಅಂತರ ಕಾಯ್ದುಕೊಂಡಾಗ ವ್ಯಕ್ತಿತ್ವ ಹಾಗೂ ಬದುಕು ಸುಂದರವಾಗಲಿದೆ. ಯಾವುದೇ ಅಪಘಾತವಾಗಿ ಬದುಕಿನ ಯಾವ ಭಾಗವೂ ಜಖಂಗೊಳ್ಳದೆ ಹಸನಾಗಿ ಇರಿಸಿಕೊಳ್ಳಲು ಸಾಧ್ಯವಿದೆ. ಇದು ಹೇಗೆ ಎಂದರೆ? ಒಂದು ಸೋಂಕು ತಗುಲಿದ ಗಿಡವನ್ನು ಗಾರ್ಡನ್‌ನಿಂದ ದೂರವಿಟ್ಟಂತೆ. ಉಳಿದ ಗಿಡಗಳ ರಕ್ಷಣೆಗೆ ಇದೊಂದು ಅತ್ಯುತ್ತಮ ಕ್ರಮ. ಇದೇ ನಿಯಮವನ್ನು ಅಳವಡಿಸಿಕೊಂಡು ನಮ್ಮ ಬದುಕು, ಮನಸ್ಸನ್ನು ಅನಗತ್ಯ ವಿಚಾರದಿಂದ, ವ್ಯಕ್ತಿಗಳಿಂದ ದೂರ ಉಳಿಸಿಕೊಳ್ಳಬೇಕು. ಆಗಷ್ಟೇ ನಮ್ಮೊಳಗಿನ ನಾವು ʻಗರ್ಭ ಗುಡಿಯ ಮೂರ್ತಿʼಯಾಗಿ ಅರಳುವುದು!
Advertisement
ನಿಮ್ಮನ್ನು ಕಡೆಗಣಿಸುವ ಸಂಬಂಧಕ್ಕಾಗಿ ನಿಮ್ಮನ್ನು ಕಳೆದು ಕೊಳ್ಳಬೇಕಿಲ್ಲ!
ಎಷ್ಟೋ ಸಂದರ್ಭದಲ್ಲಿ ಒಂದು ಸಂಬಂಧವನ್ನು ಉಳಿಸಿಕೊಳ್ಳಲು ಒಂದು ಬದಿಯಿಂದ ಮಾತ್ರ ಪ್ರಯತ್ನಗಳಾಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಿಲ್ಲ ಎಂದಾಗ ಅಂತಹ ಸಂಬಂಧ ಉಳಿಸಿಕೊಳ್ಳುವ ಯಾವ ಪ್ರಯತ್ನವೂ ಬೇಡ. ಯಾಕೆಂದರೆ ʻಬೆಟ್ಟಕ್ಕೆ ಮಣ್ಣು ಹೊತ್ತುʼ ಪ್ರಯೋಜನವಾಗೋದೇನಿದೆ? ಇಂತಹ ಪ್ರಯತ್ನ ನಿಮ್ಮನ್ನು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಬಹಳಷ್ಟು ದುರ್ಬಲಗೊಳಿಸುತ್ತದೆ. ಇಂತಹ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಖಂಡಿತವಾಗಿಯೂ ನಾವಿಡುವ ಉತ್ತಮ ಹೆಜ್ಜೆ.
Advertisement
ನಿಮ್ಮನ್ನು ನುಂಗಿ ಬಿಡುವ ನಿಮ್ಮ ಮೆಚ್ಚಿನ ವ್ಯಸನದಿಂದ!
ನನಗೆ ಆಗೆಲ್ಲ ಸಿಗರೇಟ್ ಬೇಕಿತ್ತು.. ಈಗ ನೋಡಿ ಅದು ಕಸ ಎಂದು ಭಾವಿಸಿದ್ದೇನೆ. ಹಾಗೇ! ಎಷ್ಟೋ ಸಲ ಮನುಷ್ಯ ಒಂದಲ್ಲ ಒಂದು (Hobby) ಹವ್ಯಾಸ, ಚಟಕ್ಕೆ (Habbits) ಅಂಟಿಕೊಂಡು ಬಿಡುತ್ತಾನೆ. ಹಾಗಂತ ಅದು ನಮ್ಮನ್ನು ಅಂಟಿಕೊಳ್ಳದಂತೆ ಬಿಡಿಸಿಕೊಂಡು ಹೊರಬರುವ ಮಾರ್ಗ ನಮ್ಮಲ್ಲೇ ಇರುತ್ತದೆ. ನಾವದನ್ನು ಹುಡುಕಿಕೊಳ್ಳಬೇಕು. ಈ ವಿಚಾರದಲ್ಲಿ ಗಾಂಧಿ ನಮ್ಮನ್ನು ಕಾಡಲೇ ಬೇಕು!
ಎಷ್ಟೋ ಸಲ ಒಂದು ಸಿಗರೇಟ್ ಹಚ್ಚಿ ಹೊಗೆ ಬಿಡುವುದು, ಒಂದು ಪೆಗ್ ತೆಗೆದುಕೊಳ್ಳುವುದು ಒಂಥರಾ ಸ್ಟೈಲ್! ಆದರೆ ಅದು ನಮ್ಮ ಜೀವನದ ಸ್ಮೈಲ್ ಕದಿಯಬಾರದು. ಈ ನಿಟ್ಟಿನಲ್ಲಿ ನಿಮ್ಮ ಅಂತರದ ಬಗ್ಗೆ ಎಚ್ಚರಿಕೆ ಇರಲಿ!
ಅಹಂನಿಂದ ಅಂತರ!
ಅಹಂ ನಮ್ಮನ್ನು ಅಂಧಕಾರದ ಕೂಪಕ್ಕೆ ಕೊಂಡೊಯ್ಯುವ ಮಾರ್ಗ. ಅದರ ಬಗ್ಗೆ ನಮಗೆ ಸಾಕಷ್ಟು ಎಚ್ಚರಿಕೆ ಇರಬೇಕು. ಒಮ್ಮೆ ನಮ್ಮಲ್ಲಿರುವ ಯಾವುದೋ ಗುಣ, ಹಣ, ಜ್ಞಾನದ ಬಗ್ಗೆ ಅಹಂ ಬಂದರೆ ನಮ್ಮಲ್ಲಿ ಇರುವ ಎಲ್ಲಾ ಅಮೂಲ್ಯ ವಿಚಾರಗಳು ನಗಣ್ಯವಾಗುತ್ತವೆ. ಇದರಿಂದಾಗಿ ಅಹಂನ ಕಣ್ಣಿಗೆ ಕುಕ್ಕುವಂತೆ ಇಂದೇ ಕೀಪ್ ಡಿಸ್ಟೆನ್ಸ್ ಬೋರ್ಡ್ ಬರೆಸಿಬಿಡಿ!
ವ್ಯಕ್ತಿತ್ವವನ್ನೇ ಕುರೂಪಗೊಳಿಸುವ ಕೋಪ!
ಹೌದು ಈ ಒಂದು ವಿಚಾರದಿಂದ ಅಗತ್ಯವಾಗಿ ದೂರ ಉಳಿಯಲೇ ಬೇಕು. ಇಲ್ಲವಾದಲ್ಲಿ ನೀವು ಎಷ್ಟೇ ಸದ್ಗುಣ ಸಂಪನ್ನರಾದರೂ ಅದು ವ್ಯರ್ಥ. ಇದೊಂದು ಗುಣದ ಬಗ್ಗೆ ನಾನು ಸುಮ್ನೆ ಬರೆಯ ಬೇಕಷ್ಟೇ! ಇದರ ಬಗ್ಗೆ ಮುಂಗೋಪಿಯಾದ ನೀನು ಬರೆಯುವುದೆಷ್ಟು ಸರಿ? ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ! ಆದರೆ ಒಂದು ಹೆಮ್ಮೆ ಇದೆ. ಮೊದಲಿಗೆ ಹೋಲಿಸಿದರೆ 90% ಕಡಿಮೆ ಆಗಿದೆ. ಆ ಒಂದು ನೈತಿಕತೆಯಿಂದ ಈ ಅಂಶದ ಮೇಲೆ ಬರೆಯಬಹುದೆಂಬ ವಿಶ್ವಾಸವಿದೆ.
ಕೋಪ ನಮ್ಮನ್ನು ಸುಡುತ್ತದೆಯೇ ಹೊರತು, ರಕ್ಷಿಸುವುದಿಲ್ಲ. ಹಾಗಿದ್ದಾಗ ಅದರ ಅಗತ್ಯವೂ ಇಲ್ಲ ಅಲ್ಲವೇ? ಮನಸ್ಸನ್ನು ಸುಡುವ ಈ ಒಂದು ಗುಣವನ್ನು ನಿಧಾನ, ನಿಧಾನವಾಗಿ ಬಿಡಲು ಸಾಧ್ಯವಿದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ಕೋಪವನ್ನು ಕಡಿಮೆ ಮಾಡಬಹುದು. ಇದರಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತು. ಹೀಗಿದ್ದಾಗ ಯಾಕೆ ಪ್ರಯತ್ನಿಸಬಾರದು?
ನಮಗಿಷ್ಟವಿಲ್ಲದ ಯಾವುದೇ ವಿಚಾರವಿರಲಿ!
ನಮಗೆ ಇಷ್ಟ ಇಲ್ಲದ ಯಾವುದೇ ವಿಚಾರವಿರಲಿ.. ಅದು ಕೋಟಿ ಕೊಟ್ಟರು ಬೇಡ ಎಂಬ ದೃಢ ನಿರ್ಧಾರ ನಮಗಿರಬೇಕು. ಆಗಷ್ಟೇ ಅನಗತ್ಯ ಚರ್ಚೆಗಳು ನಮ್ಮನ್ನು ಹುಡುಕಿ ಬರುವುದಿಲ್ಲ. ಅಂದರೆ ಅನಗತ್ಯ ತೊಂದರೆಗಳು ನಮಗೆ ಅಂಟುವುದಿಲ್ಲ. ಯಾರಿಗೋ ಬೇಜಾರಾಗುತ್ತದೆ ಎಂದು ಇಷ್ಟವಿಲ್ಲದ್ದನ್ನು ಯಾರೂ ಒಪ್ಪಿಕೊಳ್ಳುವ ಅಗತ್ಯವಿಲ್ಲ. ನಮ್ಮ ಖುಷಿಗೆ ಈ ನಿಲುವು ಖಂಡಿತ ಸಹಾಯ ಮಾಡುತ್ತದೆ. ಮುಲಾಜಿಲ್ಲದೆ ನಮಗಿಷ್ಟವಿಲ್ಲದ ಯಾವುದೇ ವಿಚಾರಕ್ಕಾಗಲಿ, ವ್ಯಕ್ತಿಗಾಗಲಿ ಅಂತರದ ಪಾಠ ಮಾಡಿಬಿಡಿ!