CinemaDharwadDistrictsKarnatakaLatestMain PostSouth cinema

ನಂಗೆ ಮನೆ ಕೊಟ್ಟ ದೇವ್ರು ಇಂದು ನಮ್ಮ ಜೊತೆ ಇಲ್ಲ: ಬಹುಭಾಷಾ ನಟ ಚರಣ್ ರಾಜ್ ಕಂಬನಿ

ಧಾರವಾಡ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರ ನಿಧನಕ್ಕೆ ಬಹುಭಾಷಾ ನಟ ಚರಣರಾಜ್ ಕೂಡಾ ಸಂತಾಪ ವ್ಯಕ್ತ ಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಶ್ರೀಮಂತ ಸಿನೆಮಾ ಶೂಟಿಂಗ್‍ನಲ್ಲಿರುವ ಚರಣ್‍ರಾಜ್ ವಿಡಿಯೊ ಮಾಡಿ ಕಂಬನಿ ಮಿಡಿದಿದ್ದು, ಕರುಣಾನಿಧಿ ಜೊತೆ ಕೆಲಸ ಮಾಡಿದ ದಿನಗಳನ್ನು ಸ್ಮರಿಸಿದ್ದಾರೆ.

ತೆಲುಗು ಸಿನಿಮಾ ಮಾಡಿ ನಾನು ಮದ್ರಾಸ್ ಅಲ್ಲಿ ಸೆಟ್ಲ್ ಆಗಿದ್ದೆ. ಅಲ್ಲಿ ನನಗೆ ಇರೋದಿಕ್ಕೆ ಮನೆ ಇರಲಿಲ್ಲ. ಆ ಸಂದರ್ಭದಲ್ಲಿ ಕರುಣಾನಿಧಿ ಅವರು ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಅವರ ಬಳಿ ಹೋಗಿ ಮನೆ ಬೇಕು ಅಂತ ಕೇಳಿದ್ದೆನು. ಆವಾಗ ಅವರು ನನ್ನ ದೊಡ್ಡ ಮಗ ಅಳಗಿರಿಯ ಮನೆ ಇದೆ ಬೇಕಾದ್ರೆ ತಗೋ ಅಂತ ಹೇಳಿದ್ದರು. ಈ ಮಾತು ಕೇಳುತ್ತಿದ್ದಂತೆಯೇ ನನಗೆ ಕಣ್ಣಲ್ಲಿ ನೀರು ಬಂತು. ಆ ಮನೆಗೆ ಅವರು ಹಣ ತಗೊಂಡಿಲ್ಲ. ಆದ್ರೆ ಅದನ್ನು ನನ್ನ ಹೆಸರಿಗೆ ರಿಜಿಸ್ಟಾರ್ ಮಾಡಿಕೊಟ್ರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನನಗೆ ಮನೆ ಕೊಟ್ಟ ದೇವರು ಕರುಣಾ ನಿಧಿ ಎಂದರು.

ಇಂದು ಕರುಣಾನಿಧಿಯವರು ನಮ್ಮನ್ನು ಅಗಲಿದ್ದಾರೆ ಎಂಬುದು ನಂಬಲು ಅಸಾಧ್ಯವಾದ ವಿಷಯವಾಗಿದೆ. ನಮ್ಮೆಲ್ಲರ ಆತ್ಮೀಯ ರಾಜಕೀಯ ನಾಯಕರರಾಗಿದ್ದಾರೆ. ಅವರು 10 ವರ್ಷ ಇರುತ್ತಾರೆ. ಮತ್ತೆ ನಮ್ಮ ಮುಖ್ಯಮಂತ್ರಿ ಆಗುತ್ತಾರೆ ಅಂತ ಅಂದುಕೊಂಡಿದ್ದೆವು. ಅವರ ಸೇವೆ ಬರೀ ರಾಜಕೀಯ ಮಾತ್ರವಲ್ಲದೇ ಸಿನಿಮಾ ರಂಗಕ್ಕೂ ಇದೆ. ತಮಿಳಿನ ನನ್ನ ಮೊದಲ ಸಿನಿಮಾ ನೀತಿಕ್ಕು ತಂಡನೈಗೆ ಕರುಣಾನಿಧಿಯವರೇ ಡೈಲಾಗ್ಸ್ ಬರೆದಿದ್ದರು. ಹೀಗಾಗಿ ಸ್ನೇಹಿತರು ನೀನು ತುಂಬಾನೇ ಲಕ್ಕಿ ಅಂತ ಹೇಳುತ್ತಿದ್ದರು. ಯಾಕಂದ್ರೆ ಶಿವಾಜಿ ಗಣೇಶ್ ಅವರ ಮೊದಲನೇ ಸಿನಿಮಾ ಪರಾಶಕ್ತಿಗೆ ಇವರೇ ಡೈಲಾಗ್ ಬರೆದಿದ್ದಂತೆ. ಅವರಿಗೆ ಇವರು ಮೊದಲನೇ ಬರಹಗಾರರಂತೆ. ಇದೀಗ ನಿನಗೂ ಇವರೇ ಮೊದಲನೇ ಬರಹಗಾರ. ಮುಂದೆ ತುಂಬಾನೇ ಚೆನ್ನಾಗಿರ್ತಿಯಾ ಅಂತ ಹೇಳುತ್ತಿದ್ದರು. ಅವರು ಹೇಳಿದಂಗೆ ಆ ಸಿನಿಮಾ ನೂರು ದಿನ ಓಡಿತ್ತು. ಇದೇ ಸಿನಿಮಾವನ್ನು ಹಿಂದಿಯಲ್ಲಿಯೂ ಮಾಡಿದ್ವಿ. ಅಲ್ಲಿ ಕೂಡ 25 ವಾರ ಓಡಿತ್ತು ಅಂತ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಗದ್ಗದಿತರಾದ್ರು.

ನನಗೆ ಮನೆ ಕೊಟ್ಟ ದೇವರು ಇಂದು ನಮ್ಮ ಜೊತೆ ಇಲ್ಲ. ಅವರ ಅಂತಿಮ ದರ್ಶನ ಮಾಡಬೇಕೆಂಬ ಆಸೆ ಇತ್ತು. ಆದ್ರೆ ಶೂಟಿಂಗ್ ಇರುವುದರಿಂದ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಒಬ್ಬ ಮಹಾನ್ ವ್ಯಕ್ತಿ ಇಂದು ದೇವರ ವಶವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸಂತಾಪ ಸೂಚಿಸಿದ್ರು.

Leave a Reply

Your email address will not be published. Required fields are marked *

Back to top button