ಜೈಪುರ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ (Karni Sena chief) ಮುಖ್ಯಸ್ಥ ಸುಖ್‍ದೇವ್ ಸಿಂಗ್ ಗೊಗಮೆಡಿಯವರು ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾರೆ.
ಜೈಪುರದಲ್ಲಿ ಇಂದು ಹಾಡಹಗಲೇ ಈ ಘಟನೆ ನಡೆದಿದೆ. ಅಪರಿಚಿತರ ಗುಂಡೇಟಿಗೆ ಸುಖ್‍ದೇವ್ ಜೊತೆಗಿದ್ದ ಇನ್ನಿಬ್ಬರಿಗೂ ಗಾಯಗಳಾಗಿವೆ. ಇಂದು ಮಧ್ಯಾಹ್ನ 1.45ರ ಸುಮಾರಿಗೆ ಸುಖ್‍ದೇವ್ ಸಿಂಗ್ ಅವರು ತಮ್ಮ ಮನೆಯ ಆವರಣದಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಸ್ಕೂಟರ್‍ನಲ್ಲಿ ಎಂಟ್ರಿಕೊಟ್ಟ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡ ಸುಖ್‍ದೇವ್ ಸಿಂಗ್ (Sukhdev Singh Gogamedi) ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು. ಇನ್ನು ಇವರ ಜೊತೆಗಿದ್ದ ಅಜಿತ್ ಸಿಂಗ್‍ಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಾಥಮಿಕ ಮೂಲಗಳ ಪ್ರಕಾರ, ಸುಖ್‍ದೇವ್ ಸಿಂಗ್ ಅವರು ತಮ್ಮ ನಿವಾಸದಲ್ಲಿರುವುದನ್ನು ಖಚಿತಪಡಿಸಿಕೊಂಡ ನಾಲ್ವರು ಈ ಕೃತ್ಯ ಎಸಗಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಸುಖ್‍ದೇವ್ ಸಿಂಗ್ ಮನೆಯ ಸೆಕ್ಯೂರಿಟಿಯಾಗಿದ್ದಾರೆ ಎಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ (Umesh Mishra) ಮಾಹಿತಿ ನೀಡಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.