ಬೆಂಗಳೂರು: ಮತ್ತೆ ನಂದಿನಿ ಹಾಲಿನ ದರ (Nandini Milk Rate) ಏರಿಕೆಯಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ.
ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು
ಬೆಲೆ ಏರಿಕೆ ಯಾಕೆ?
ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟ ಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?
ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.