ಧಾರವಾಡ: ಸಿಎಂ ಸಿದ್ದರಾಮಯ್ಯನವರ (CM Siddaramaiah) ಭದ್ರತಾ ವಿಚಾರದಲ್ಲಿ ಧಾರವಾಡ ಪೊಲೀಸರು (Dharwad Police) ಎಡವಿದ್ರಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ವೇದಿಕೆ ಮೇಲೆ ಕುಳಿತವರ ಮಾಹಿತಿ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಮೊದಲೇ ಗೊತ್ತಿತ್ತು ಎಂಬ ವಿಚಾರ ಈಗ ಮೂಲಗಳಿಂದ ತಿಳಿದು ಬಂದಿದೆ.
Advertisement
ತನ್ವೀರ್ ಪೀರಾ (Tanveer Peera) ಮೇಲಿನ ಅಪರಾಧಗಳ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಇತ್ತು. ಆದರೆ ಯಾವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಬಿಜೆಪಿ ಶಾಸಕ ಯತ್ನಾಳ್ ಸಿಡಿಸಿದ ʼಐಸಿಸ್ ಬಾಂಬ್ʼ ನಿಂದ ಎಚ್ಚೆತ್ತ ಪೊಲೀಸರು ಕಾರ್ಯಕ್ರಮ ಆಯೋಜಕರಿಂದ ಮತ್ತೊಮ್ಮೆ ವೇದಿಕೆ ಮೇಲೆ ಕುಳಿತವರಿಂದ ಮಾಹಿತಿ ಪಡೆಯುತ್ತಿದ್ದಾರೆ.
Advertisement
ವೇದಿಕೆಯ ಮೇಲೆ ಸಿಎಂ ಜೊತೆಗಿದ್ದ 26 ಜನರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್ ಮತ್ತಷ್ಟು ಬಾಂಬ್ ಸಿಡಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ಎಚ್ಚೆತ್ತುಕೊಂಡು ಗಣ್ಯರ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಯತ್ನಾಳ್, ತನ್ವೀರ್ ಪೀರಾ ಮದರಸಾ ನಡೆಸುತ್ತಿದ್ದು, ವಿಮಾನದಲ್ಲೇ ದೇಶ, ವಿದೇಶಗಳನ್ನು ಸುತ್ತುತ್ತಿದ್ದಾರೆ. ಈ ವ್ಯಕ್ತಿಗೆ ಹಣ ನೀಡುವವರು ಯಾರು? ಟಿಕೆಟ್ ಬುಕ್ ಮಾಡುವವರು ಯಾರು? ಈ ವ್ಯಕ್ತಿಯ ಖಾತೆಗೆ ಯಾವ ದೇಶದಿಂದ ಎಷ್ಟು ಹಣ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿದರೆ ಎಲ್ಲಾ ವಿಚಾರಗಳು ಬಯಲಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಈ ವ್ಯಕ್ತಿಯ ಮೇಲೆ ತನಿಖೆ ನಡೆಸಬೇಕೆಂದು ಕೋರಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.
Advertisement
ಯಾರು ಈ ತನ್ವೀರ್ ಪೀರಾ?
ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಪೀರಾ ಈ ವರ್ಷದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ನಡೆದಿದ್ದ ಶೂಟೌಟ್ ಕೇಸಲ್ಲಿ ಮೂರನೇ ಆರೋಪಿಯಾಗಿದ್ದಾರೆ.
ಮೇ 6 ರಂದು ವಿಜಯಪುರದಲ್ಲಿ ನಡೆದ ಶೂಟೌಟ್‌ನಲ್ಲಿ ರೌಡಿ ಶೀಟರ್ ಹೈದರಾಲಿ ನದಾಫ್ ಎಂಬುವನ ಹತ್ಯೆ ನಡೆದಿತ್ತು. ಆ ಹತ್ಯೆಯನ್ನು ತನ್ವೀರ್ ಪೀರಾ ಹಾಸ್ಮಿ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹತ್ಯೆಯಾದ ಹೈದರಾಲಿ ಪತ್ನಿ ನಿಶಾತ್ ದೂರು ದಾಖಲಿಸಿದ್ದರು. ದೂರಿನಲ್ಲಿ ತನ್ವೀರ್ ಪೀರಾ ಹೆಸರನ್ನು ಕೂಡ ಹಾಕಲಾಗಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಐಸಿಸ್ ಜೊತೆ ನಂಟು ಸಾಬೀತು ಪಡಿಸಿದ್ರೆ ದೇಶ ತೊರೆಯುತ್ತೇನೆ: ಯತ್ನಾಳ್‌ಗೆ ತನ್ವೀರ್ ಪೀರಾ ಸವಾಲ್
ವಿಜಯಪುರ ಮೂಲದವ ಸದ್ಯ ಸೂಫಿ ಎಂದು ಗುರುತಿಸಿಕೊಂಡಿರುವ ತನ್ವೀರ್ ಪೀರಾ ದೇಶಾದ್ಯಂತ ಸುತ್ತಾಟ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ತನ್ವೀರ್ ಪೀರಾ ನಡುವಣ ವೈರತ್ವ ಇಂದಿನದ್ದಲ್ಲ. 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್ ವಿರುದ್ಧ ತನ್ವೀರ್ ಅಬ್ಬರಿಸಿದ್ದರು. ಮುಂದೆ ಬಕ್ರೀದ್ ಬರಲಿದೆ. ಆಗ ಕುರುಬಾನಿ ಕೊಡುತ್ತೇವೆ. ಆಗ ಸೈತಾನ್ ವಿರೋಧಿಸಿದರೆ ನಾವು ಸುಮ್ಮನಿರಲ್ಲ. ಒಂದು ಕುರುಬಾನಿ ಜೊತೆಗೆ ಇನ್ನೊಂದು ಕುರುಬಾನಿ ಆಗಬಾರದು. ಈಗಲೇ ಎಚ್ಚರಿಸುತ್ತಿದ್ದೇನೆ ಎಂದಿದ್ದರು. ಈ ಸಂಬಂಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ತನ್ವೀರ್ ವಿರುದ್ಧ ಕೇಸ್ ದಾಖಲಾಗಿತ್ತು.