ಬೆಂಗಳೂರು: ವಿಷಕಾರಿ ದತ್ತೂರ ಬೀಜಗಳನ್ನು ಆಹಾರ ಉತ್ಪನ್ನಗಳಾಗಿ ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ಜಾಲತಾಣಗಳ ಆಹಾರ ಪರವಾನಗಿ (Food Licences) ಅಮಾನತು ಮಾಡಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆದೇಶ ಮಾಡಿದೆ.
Amazon, Swiggy Instamart, ಜಾಲತಾಣಗಳ ಆಹಾರ ಪರವಾನಗಿ ಅಮಾನತು ಮಾಡಲಾಗಿದೆ. ಬೀಜಗಳ ಮಾರಾಟ, ವಿತರಣೆ, ಪ್ರಚಾರವನ್ನು ಮಾಡಿದ್ದಕ್ಕೆ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಭ್ರಷ್ಟಾಚಾರ ಆರೋಪಿಗೆ ರಾಜಾತಿಥ್ಯ – ನ್ಯಾಯಾಧೀಶರ ದಿಢೀರ್ ರೇಡ್‌ನಲ್ಲಿ ಅಕ್ರಮ ಬಯಲು
ಹೊಕೋಟೆಯ ಇ-ಕಾಮರ್ಸ್ ವೇರ್ ಹೌಸ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ದತ್ತೂರ ಬೀಜಗಳು ಪತ್ತೆಯಾಗಿದ್ದವು. ಇದರಿಂದ ಎಚ್ಚೆತ್ತ ಇಲಾಖೆ ಆಹಾರ ಪರವಾನಗಿ ಅಮಾನತು ಮಾಡಿದೆ.
ದತ್ತೂರ ಬೀಜಗಳು ವಿಷಕಾರಿಯಾಗಿದ್ದು, ಅದರ ಸೇವನೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟಾಗುತ್ತದೆ ಎಂದು ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ ಈ ಮೂರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ದತ್ತೂರ ಬೀಜದ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ. ಜೊತೆಗೆ ಆಹಾರ ಉತ್ಪನ್ನಗಳ ಮಾರಾಟ, ವಿತರಣೆ ಮತ್ತು ಪ್ರದರ್ಶನವನ್ನು ನಿಲ್ಲಿಸಲು ಸಹ ಆದೇಶಿಸಲಾಗಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳು ಅನುಸರಣಾ ವರದಿಗಳನ್ನು ತಕ್ಷಣವೇ ಸಲ್ಲಿಸಬೇಕು. ನಂತರ ಅಮಾನತು ರದ್ದು ಮಾಡುವ ಬಗ್ಗೆ ಪ್ರತ್ಯೇಕ ಆದೇಶವನ್ನು ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಆ.24 ರಂದು ಮೂರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳು ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ಯಾರೂ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. ದಾಖಲೆಗಳ ಸಲ್ಲಿಕೆಗೆ ಹೆಚ್ಚುವರಿ ಸಮಯವನ್ನು ಕೋರಲಾಗಿದೆ. ಇದರ ನಡುವೆ ದತ್ತೂರ ಹಣ್ಣುಗಳು ಮತ್ತು ಬೀಜಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಬಿಗ್‌ಬಾಸ್ಕೆಟ್ ಎಫ್‌ಡಿಎಗೆ ತಿಳಿಸಿತು. ಮುಂದೆ ಮಾರಾಟದ ವಿಧಾನವನ್ನು ಸರಿಪಡಿಸಿ ‘ಮಾನವ ಬಳಕೆಗಾಗಿ ಅಲ್ಲ’ ಎಂದು ಉಲ್ಲೇಖಿಸಲಾಗುವುದು ಎಂದು ಮನವಿ ಮಾಡಿದೆ. ಈ ಮನವಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: “ಮನೆಗೆಲಸ ಮಾಡು, ವೃದ್ಧ ಪೋಷಕರನ್ನು ನೋಡಿಕೊಂಡಿರು”- ಪತ್ನಿಗೆ ಪತಿ ಆದೇಶಿಸುವಂತಿಲ್ಲ
