– ಬೆಂಗಳೂರಿನಲ್ಲಿ ಸಿಡಿ ತಯಾರಿಸೋ ದೊಡ್ಡ ಫ್ಯಾಕ್ಟರಿ ಇದೆ
– ಷಡ್ಯಂತ್ರದ ಬಗ್ಗೆ ಸಿಬಿಐ ತನಿಖೆಯಾಗಬೇಕು
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumarasway) ಅವರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಸಿದ ದಿಢೀರ್ ಧರಣಿ ಬೆನ್ನಲ್ಲೇ, ಅವರಿಗೆ ನೈತಿಕ ಬೆಂಬಲ ಸೂಚಿಸಲು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಕಮಿಷನರ್ ಕಚೇರಿಗೆ ಆಗಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಭ್ರಷ್ಟ ರಾಜಕಾರಣಿಗಳ ನೇತೃತ್ವದಲ್ಲಿ ಬ್ಲ್ಯಾಕ್ಮೇಲ್ ದಂಧೆ ನಡೆಯುತ್ತಿದೆ ಎಂದು ಗುಡುಗಿದರು
ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್(Sting Operation) ಹಾಗೂ ಸಿಡಿ ತಯಾರಿಸುವ ದೊಡ್ಡ ಕಾರ್ಖಾನೆಯೇ ಇದೆ. ಸ್ಟಿಂಗ್ ಮಾಡಿ ದುಡ್ಡು ಮಾಡಿಕೊಳ್ಳುವುದು, ಜನರನ್ನು ಬ್ಲ್ಯಾಕ್ಮೇಲ್ ಮಾಡುವುದೇ ಕೆಲ ಭ್ರಷ್ಟ ರಾಜಕಾರಣಿಗಳ ಕಾಯಕವಾಗಿದೆ. ಅಧಿಕಾರಿಗಳು, ಮಠಾಧೀಶರು ಹಾಗೂ ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡಲು ಪ್ರತ್ಯೇಕ ಐಟಿ ಟೀಮ್ ಕೆಲಸ ಮಾಡುತ್ತಿದೆ. ಈ ಸಿಡಿ ಫ್ಯಾಕ್ಟರಿ ಬೇರೆಲ್ಲೂ ಇಲ್ಲ, ಇದೇ ಬೆಂಗಳೂರಿನಲ್ಲಿದೆ ಎಂದು ಆಕ್ರೋಶ ಹೊರಹಾಕಿದರು.
ಅಸಲಿ ಕಳ್ಳರನ್ನು, ಸಿಡಿ ಫ್ಯಾಕ್ಟರಿ ಸೂತ್ರಧಾರಿಗಳನ್ನು ಹಿಡಿಯುವುದನ್ನು ಬಿಟ್ಟು, ಅಕ್ರಮಗಳನ್ನು ಬಯಲಿಗೆಳೆದವರ ಬೆಂಬಲಿಗರನ್ನು, ಜೆಡಿಎಸ್ ಕಾರ್ಯಕರ್ತರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಈ ಇಡೀ ಷಡ್ಯಂತ್ರದ ಬಗ್ಗೆ ಸಮಗ್ರ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಅವರ ಹೋರಾಟಕ್ಕೆ ಸಾಥ್ ನೀಡಲು ಬಂದಿರುವುದಾಗಿ ತಿಳಿಸಿದ ಯತ್ನಾಳ್, ಕುಮಾರಸ್ವಾಮಿ ಅವರು ಸರ್ಕಾರದ ಹಗರಣಗಳನ್ನು ಒಂದೊಂದಾಗಿ ಹೊರಗೆಳೆಯುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ನಾನಿಲ್ಲಿಗೆ ಬಂದಿದ್ದೇನೆ. ನಾವು ಯಾವುದೇ ಹಲ್ಕಾ ಕೆಲಸ ಮಾಡಿಲ್ಲ, ಯಾರ ಬೆದರಿಕೆಗೂ ನಾವು ಹೆದರುವ ಅಗತ್ಯವಿಲ್ಲ. ಯಾವುದೋ ಬೀದಿ ರೌಡಿಗಳಿಗೆ ಧಮ್ಕಿ ಹಾಕಿದಂತೆ ನಮ್ಮ ಮೇಲೆ ಪ್ರತಾಪ ತೋರಿಸಲು ಬರಬೇಡಿ. ನಾವಾಗಲಿ, ಕುಮಾರಸ್ವಾಮಿ ಅವರಾಗಲಿ ಹೆದರೋ ಮಕ್ಕಳಲ್ಲ ಎಂದು ಗುಡುಗಿದರು.
ಮುಖ್ಯಮಂತ್ರಿಗಳು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಗೃಹ ಸಚಿವರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದು, ಒಬ್ಬ ಮಂತ್ರಿಯಾಗಿ ಹೇಗಿರಬೇಕು ಎಂಬ ಮಿನಿಮಮ್ ಕಾಮನ್ಸೆನ್ಸ್ ಕೂಡ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ, ಎಲ್ಲರನ್ನೂ ಜೈಲಿಗೆ ಹಾಕ್ತೀರಾ? ಎಷ್ಟು ಜನರನ್ನು ಜೈಲಿಗೆ ಕಳಿಸುತ್ತೀರಿ ನೋಡೋಣ? ಅಧಿಕಾರದ ಮದದಲ್ಲಿ ಮಾತನಾಡಬೇಡಿ ಎಂದು ಸಿಟ್ಟು ಹೊರಹಾಕಿದರು.
ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ವಿಚಾರಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ” ಎಂದು ಪರೋಕ್ಷವಾಗಿ ತಮ್ಮದೇ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೆಪಿಎಸ್ಸಿ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ ಅವರು, ಕೆಪಿಎಸ್ಸಿ ಹಗರಣದ ತನಿಖೆಗೆ ಹೈಕೋರ್ಟ್ ದಕ್ಷ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಿಸಿತ್ತು. ಆದರೆ ಆ ಪ್ರಾಮಾಣಿಕ ತನಿಖೆ ಈ ಸರ್ಕಾರಕ್ಕೆ ಬೇಕಿಲ್ಲ. ಈ ಹಗರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಛೀಮಾರಿ ಹಾಕಿದೆ. ರಾಜ್ಯದಲ್ಲಿ ಅತ್ಯಂತ ಕೆಟ್ಟ ರಾಜಕಾರಣ ನಡೆಯುತ್ತಿದ್ದು, ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

