`ಗಂಧದಗುಡಿ’ ಸಿನಿಮಾ ಮಾದರಿಯಲ್ಲೇ ಕೊಡಗಿನಲ್ಲಿ ಆನೆಗಳ ಅಭಯಾರಣ್ಯ ಮಾಡಲು ಸರ್ಕಾರ ಪ್ಲ್ಯಾನ್‌

Public TV
2 Min Read
Dubare elephant camp 3

– ನಾಡಿನಲ್ಲಿ ಬೀಡುಬಿಟ್ಟಿರುವ 200 ಆನೆಗಳಿಗೆ ಸಾಫ್ಟ್ ಏರಿಯಾ ಫಿಕ್ಸ್‌

ಕೊಡಗು: ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕಳೆದ ಕೆಲ ವರ್ಷಗಳಲ್ಲಿ ಕಾಡಾನೆಗಳ ದಾಳಿಗೆ 33 ಜೀವಗಳು ಬಲಿಯಾಗಿವೆ. 53 ಜನ ಶಾಶ್ವತ ಅಂಗವೈಕಲ್ಯತೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ (Forest Department) ಕ್ರಮಗಳ ಹೊರತಾಗಿಯೂ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ʻಗಂಧದ ಗುಡಿʼ ಸಿನಿಮಾ ಮಾದರಿಯಲ್ಲೇ ʻಆನೆಗಳ ಅಭಯಾರಣ್ಯʼ (Elephant Sanctuary) ಮಾಡಲು ಸಿದ್ಧತೆ ಮಾಡಿಕೊಂಡಿದೆ.

Elephant team

ಇತ್ತ ಜನರಿಗೂ ತೊಂದರೆಯಾಗದೇ ಕಾಡಾನೆಗಳ (Wild elephant) ರಕ್ಷಣೆಯನ್ನೂ ಮಾಡುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಕೊಡಗಿನಲ್ಲಿ 2,000 ಹೆಕ್ಟೆರ್‌ ಪ್ರದೇಶ (ರಾಜ್ಯಾದ್ಯಂತ ಒಟ್ಟು 12,000 ಹೆಕ್ಟೆರ್‌ ಪ್ರದೇಶ)ವನ್ನು ಗುರುತಿಸಿ ನಾಡಿನಲ್ಲೇ ಬೀಡುಬಿಟ್ಟಿರುವ ಕಾಡಾನೆಗಳನ್ನ ಕಾಡಿಗೆ ಸ್ಥಳಾಂತರಿಸಲು ಮುಂದಾಗಿದೆ.

ಬೆಳೆ ನಷ್ಟ ಮತ್ತು ಜೀವ ಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಗುರುತಿಸಿ ಅಭ್ಯಯಾರಣ್ಯಕ್ಕೆ ಬಿಡಲು ಮುಂದಾಗಿದೆ. ಈಗಾಗಲೇ ಜಾಗ ಗುರುತಿಸೋದಕ್ಕೂ ಅನುಮೋದನೆ ನೀಡಿದೆ. ಮೊದಲಿಗೆ ಕೊಡಗಿನ ಗ್ರಾಮೀಣ ಭಾಗದಲ್ಲಿ ಬೀಡುಬಿಟ್ಟಿರುವ 200 ಆನೆಗಳಿಗೆ ಆಶ್ರಯ ಕಲ್ಪಿಸಲು ರಾಜ್ಯ ಸರ್ಕಾರ ಯೋಜಿಸಿದೆ.

Dubare elephant camp 5

ಕಳೆದ ಜನವರಿ ತಿಂಗಳಲ್ಲಿ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಉಪಸ್ಥಿತಿಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಉಪಟಳ ನೀಡುವ ಕಾಡಾನೆಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆಯಾಗಿತ್ತು. ಆಗ ಸೂಕ್ಷ್ಮ ಮತ್ತು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಬೇಕಿರುವ ಜಾಗವನ್ನು ಗುರುತಿಸಲು ಸರ್ಕಾರ ಸಮ್ಮತಿ ನೀಡಿತ್ತು. ಅದರಂತೆ ಈಗ ಜಾಗ ಗುರುತಿಸಲು ಸಿದ್ಧತೆ ನಡೆಯುತ್ತಿದೆ.

Dubare elephant camp

ಏಕೆ ಈ ಪ್ಲ್ಯಾನ್‌?
ಪುಂಡಾನೆಗಳನ್ನು ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವುದರಿಂದ ಆನೆಗಳು ಮರಳಿ ಗ್ರಾಮಕ್ಕೆ ಲಗ್ಗೆಯಿಡುವುದಿಲ್ಲ. ತಂತ್ರಜ್ಞಾನ ಬಳಸಿಕೊಂಡು ಸಾಫ್ಟ್ ಏರಿಯಾ ತೊರೆದು ಬಾರದಂತೆ ನಿಯಂತ್ರಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿ 2014 ರಿಂದ 2024 ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಂದಕಗಳು ಮತ್ತು ರೈಲ್ವೆ ಬ್ಯಾರಿಕೇಡ್ ದುರಸ್ತಿ ಪಡಿಸುವ ಕೆಲಸಕ್ಕೆ ಸರ್ಕಾರ 21 ಕೋಟಿ ರೂ. ನೆರವು ಬಿಡುಗಡೆ ಮಾಡಿದೆ. ಜೊತೆಗೆ ವನ್ಯಜೀವಿಗಳಿಂದ ಸಂಕಷ್ಟಕ್ಕೆ ಒಳಗಾದವರಿಗೆ ತ್ವರಿತವಾಗಿ ಒಟ್ಟು 4.72 ಕೋಟಿ ರೂ.ಗಳಷ್ಟು ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಹೊಸದಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸುಮಾರು 22 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಹೊಸ ಬ್ಯಾರಿಕೇಡ್‌ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

Share This Article