ಬೆಂಗಳೂರು: ಕೆಪಿಎಸ್‌ಸಿ (KPSC) ಅಕ್ರಮ, ಎಡವಟ್ಟುಗಳಿಗೆ ಕಡಿವಾಣ ಹಾಕುವ ಕರ್ನಾಟಕ ಲೋಕಾಸೇವಾ ಆಯೋಗ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಸುದೀರ್ಘ ಚರ್ಚೆಯ ಬಳಿಕ ಕೆಪಿಎಸ್‌ಸಿ ತಿದ್ದುಪಡಿ ವಿಧೇಯಕ ಇಂದು ಅಂಗೀಕಾರಗೊಂಡಿದೆ. ಕೆಪಿಎಸ್‌ಸಿಗೆ ಚಿಕಿತ್ಸೆ ಕೊಡುವ ಉದ್ದೇಶದಿಂದ ಸರ್ಕಾರ ಈ ವಿಧೇಯಕ ತಂದಿದೆ. ಈವರೆಗೆ ಕೆಪಿಎಸ್‌ಸಿ ಕುರಿತು ಯಾವುದೇ ನಿಯಮ ರೂಪಿಸಲು ಸರ್ಕಾರ ಕೆಪಿಎಸ್‌ಸಿ ಜೊತೆ ಸಮಾಲೋಚನೆ ಮಾಡಬೇಕೆಂಬ ನಿಯಮವಿತ್ತು. ಈಗ ಈ ನಿಯಮದಲ್ಲಿ ಬದಲಾವಣೆ ತಂದು ಕೆಪಿಎಸ್‌ಸಿಗೆ ನಿಯಮಾವಳಿ ರೂಪಿಸಲು ಅಥವಾ ತಿದ್ದುಪಡಿ ತರಲು ಸರ್ಕಾರ ಕೆಪಿಎಸ್‌ಸಿ ಜೊತೆ ಸಮಾಲೋಚನೆ ಅಗತ್ಯವಿಲ್ಲ ಎಂದು ಪ್ರಸ್ತಾಪಿಸಲಾಗಿದೆ.ಇದನ್ನೂ ಓದಿ: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ
ಅದರ ಜೊತೆಗೆ, ಕೆಪಿಎಸ್‌ಸಿಯಲ್ಲಿ ಸ್ವಜನಪಕ್ಷಪಾತಕ್ಕೆ ಬ್ರೇಕ್ ಹಾಕಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಈವರೆಗೆ ಆಯೋಗಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನದ ಪ್ರಶ್ನೆ ಬಂದರೂ ಕೆಪಿಎಸ್‌ಸಿ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನಿಸಬಹುದಿತ್ತು. ಈಗ ಈ ನಿಯಮವನ್ನು ಬದಲಿಸಿ ಆಯೋಗದ ಸಭೆಗೆ ಅಧ್ಯಕ್ಷರನ್ನು ಸೇರಿಸಿ ಒಟ್ಟು ಸದಸ್ಯರ ಶೇ.50 ರಷ್ಟು ಕೋರಂ ಅಗತ್ಯ ಎಂದು ಬದಲಾವಣೆ ಮಾಡಲಾಗಿದೆ.
ಇನ್ನೂ ಸಭೆಯಲ್ಲಿ ಎಲ್ಲಾ ತೀರ್ಮಾನ ಹಾಗೂ ನಡಾವಳಿಗಳನ್ನು ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸಬೇಕು ಎಂದೂ ಉಲ್ಲೇಖಿಸಲಾಗಿದೆ. ಆಯೋಗವು ಸದಸ್ಯರ ಆಕ್ಷೇಪದ ಹೊರತಾಗಿಯೂ ಯಾವುದಾದರೂ ತೀರ್ಮಾನ ತೆಗೆದುಕೊಂಡರೆ ಅಂತಹ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯ ನಮೂದಿಸಲು ಸದಸ್ಯರಿಗೆ ಅವಕಾಶವಿದೆ. ಸಂದರ್ಶನ ನಿಯಮಾವಳಿಗೂ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಈವರೆಗೆ ಆಯೋಗ ನಿಯೋಜಿಸಿದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಬಹುದಿತ್ತು. ಈಗ ಇದನ್ನು ಬದಲಿಸಿ, ಸಂದರ್ಶನ ಮಂಡಳಿಯಲ್ಲಿ ಆಯೋಗವು ನಿಯೋಜಿಸಬಹುದಾದ ಒಬ್ಬ ಸದಸ್ಯ ಮಾತ್ರ ಇರಬೇಕು. ಆದರೆ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ನಿಯಮದಲ್ಲಿರುವಂತೆ ಸಂದರ್ಶನ ನಡೆಸಬೇಕು ಎಂದು ನಿಯಮ ಬದಲಿಸಲಾಗಿದೆ. ಇದೇ ವೇಳೆ ವಿಪಕ್ಷ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ.ಇದನ್ನೂ ಓದಿ: ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಕೊಡಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ