ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಕರ್ನಾಟಕದ ಮೀನುಗಾರರಿಗೆ (Fishermen) ಇದೀಗ ಗೋವಾ ಗಡಿಯಲ್ಲಿಯೂ ಸಂಕಷ್ಟ ಎದುರಾಗಿದೆ. ಕೇರಳದ ಬಳಿಕ ಈಗ ಗೋವಾ ಕರಾವಳಿ ರಕ್ಷಣಾ ಪಡೆಯ (Goa Coast Guard) ಪೊಲೀಸರು ಕರ್ನಾಟಕದ ಮೀನುಗಾರಿಕಾ ಬೋಟ್ಗಳನ್ನು ಗುರಿಯಾಗಿಸಿಕೊಂಡು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕರ್ನಾಟಕದ ಮೀನುಗಾರಿಕಾ ಬೋಟ್ಗಳು ನಿಯಮದಂತೆ 12 ನಾಟಿಕಲ್ ಮೈಲು ವ್ಯಾಪ್ತಿಯನ್ನು ದಾಟಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೂ, ಗೋವಾ ಗಡಿ ಪ್ರವೇಶಿಸಿದ ತಕ್ಷಣ ಗೋವಾ ಕರಾವಳಿ ರಕ್ಷಣಾ ಪಡೆಯ (CSP) ಅಧಿಕಾರಿಗಳು ಬೋಟ್ಗಳನ್ನು ತಡೆದು ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್ ಹೈಸ್ಪೀಡ್ ರೈಲು ಸೇವೆಗೆ ಚಾಲನೆ
ಲಕ್ಷಾಂತರ ರೂಪಾಯಿ ದಂಡ ವಿಧಿಸುವುದಲ್ಲದೆ, ಮೀನುಗಾರರು ಹಿಡಿದ ಮೀನುಗಳನ್ನೂ ವಶಕ್ಕೆ ಪಡೆಯಲಾಗುತ್ತಿದೆ. ಕರ್ನಾಟಕದ ಮೀನುಗಾರಿಕಾ ಬೋಟ್ಗಳಿಂದ ಮೀನುಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಈ ಕಾರ್ಯಾಚರಣೆಗೆ ಗೋವಾ ಪೊಲೀಸರಿಗೆ ಕೇರಳದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಗೋವಾ ಅಧಿಕಾರಿಗಳ ಈ ಕ್ರಮದಿಂದ ಮಂಗಳೂರಿನ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೇರಳದ ಗಡಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕರ್ನಾಟಕದ ಮೀನುಗಾರರಿಗೆ ಇದೀಗ ಗೋವಾ ಕರಾವಳಿಯಲ್ಲಿಯೂ ನೆಮ್ಮದಿಯಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಅಶ್ವಿನಿ ವೈಷ್ಣವ್ ದಕ್ಷಿಣ ಕನ್ನಡ ಪ್ರವಾಸ – ವಂದೇ ಭಾರತ್ ಲೋಕಾರ್ಪಣೆ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಚಾಲನೆ
ರಾಜ್ಯದ ಮೀನುಗಾರರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಮೀನುಗಾರಿಕಾ ಸಚಿವರು ಈ ವಿಚಾರದಲ್ಲಿ ಮೌನ ವಹಿಸಿರುವುದಕ್ಕೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಗೋವಾ ಅಧಿಕಾರಿಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
