ಕಮಲ ಹಿಡಿದ ಯತ್ನಾಳ್, ಖೂಬಾ: ಶೀಘ್ರವೇ ನಾಲ್ವರು ಕೈ ಶಾಸಕರು ಬಿಜೆಪಿಗೆ

Public TV
1 Min Read
bsy bjp 2

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಲ್ಲಿಕಾರ್ಜುನ ಖೂಬಾ ಇಂದು ಬಿಎಸ್‍ವೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಕಮಲ ಬಾವುಟ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಬಸವಕಲ್ಯಾಣ ಜೆಡಿಎಸ್ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಕೂಡ ಪಕ್ಷಕ್ಕೆ ಸೇರ್ಪಡೆಯಾದರು.

bsy bjp 1

ಈ ವೇಳೆ ಮಾತನಾಡಿದ ಬಿಎಸ್‍ವೈ, ನಾಲ್ವರನ್ನು ಬಿಜೆಪಿಗೆ ಸ್ವಾಗತ ಮಾಡುತ್ತೇನೆ. ಇಂದು ಪಕ್ಷಕ್ಕೆ ಒಳ್ಳೆಯ ದಿನ, ಮತ್ತಷ್ಟು ಬಲ ಪಕ್ಷಕ್ಕೆ ಸೇರ್ಪಡೆಯಾಗಿದೆ. ಇದೇ ಏಪ್ರಿಲ್ 8ಕ್ಕೆ ವಿಜಯಪುರ, ಬಸವಕಲ್ಯಾಣದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸುತ್ತೇವೆ. ಈ ವೇಳೆ ಅನೇಕ ಮಾಲೀಕಯ್ಯ ಗುತ್ತೇದಾರ್ ಕೂಡ ಬಿಜೆಪಿ ಸೇರ್ಪಡೆಯಾಗುತ್ತಾರೆ. ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮೊಂದಿಗೆ ಇನ್ನು ನಾಲ್ಕು ಜನ ಕಾಂಗ್ರೆಸ್ ಶಾಸಕರನ್ನ ಕರೆದುಕೊಂಡು ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್ ನ ಮತ್ತಷ್ಟು ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ವಿವರಿಸಿದರು.

BIJ YATNAL PROTEST 2

ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖೂಬಾ, ನನ್ನ ಪಕ್ಷ ಸೇರ್ಪಡೆಗೆ ವಿರೋಧ ಮಾಡುವವರು ಕಾಂಗ್ರೆಸ್ ಏಜೆಂಟ್ ಗಳು. ನಾನು ಎಲ್ಲರ ಸಮ್ಮತಿ ಪಡೆದೆ ಪಕ್ಷ ಸೇರ್ಪಡೆಯಾಗಿದ್ದೇನೆ. ಇಬ್ಬರು ಮೂವರು ಸುಮ್ಮನೆ ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಯಡಿಯೂರಪ್ಪ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ.

ಕಾರ್ಯಕರ್ತರ ಪ್ರತಿಭಟನೆ: ಮತ್ತೊಂದೆಡೆ ಖೂಬಾ ಸೇರ್ಪಡೆ ವಿರೋಧಿಸಿ ಬೀದರ್‍ನ ಬಸವಕಲ್ಯಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ವಿಜಯಪುರದಲ್ಲಿ ಯತ್ನಾಳ್ ಬಿಜೆಪಿ ಸೇರ್ಪಡೆ ವಿರುದ್ಧ ಕಾರ್ಯಕರ್ತ ಬಾಬು ಜಗದಾಳೆ ಎನ್ನುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

Share This Article