ರಾಯಚೂರು: ಜಿಲ್ಲೆಯ ಸಿಂಧನೂರು ವಿಧಾನಸಭಾ (Sindhanur Constituency) ಕ್ಷೇತ್ರ ಪ್ರತೀ ಚುನಾವಣೆಯಲ್ಲೂ ಕುತೂಹಲಗಳ ಜೊತೆ ಭರ್ಜರಿ ಫೈಟ್‌ಗೆ ಸಾಕ್ಷಿಯಾಗುತ್ತಲೇ ಬಂದಿದೆ. ಈ ಕಾರಣಕ್ಕೆ 1957 ರಿಂದ ನಡೆದ ಚುನಾವಣೆಗಳಲ್ಲಿ ಒಮ್ಮೆ ಗೆದ್ದ ಪಕ್ಷ ಎರಡನೇ ಬಾರಿಗೆ ಸೋತಿದೆ. ಸತತವಾಗಿ ಎರಡು ಬಾರಿ ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದಿಲ್ಲ. 2023 ರ ಸಾರ್ವತ್ರಿಕ ಚುನಾವಣೆ ಕೂಡ ಸಿಂಧನೂರು ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ಸಿಂಧನೂರು ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ (Congress) 8 ಬಾರಿ, ಜೆಡಿಎಸ್ (JDS) 2 ಬಾರಿ, ಜೆಡಿಯು 1 ಬಾರಿ, ಜನತಾದಳ 1 ಬಾರಿ ಗೆದ್ದಿದೆ ಹಾಗೂ ಪಕ್ಷೇತರ ಅಭ್ಯರ್ಥಿಗಳು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ (BJP) ಇದುವರೆಗೆ ಖಾತೆಯನ್ನ ತೆರೆದಿಲ್ಲ. ಬಾದರ್ಲಿ ಹಂಪನಗೌಡ ಕಾಂಗ್ರೆಸ್ ನಿಂದ 2 ಬಾರಿ, ಜೆಡಿಯು ನಿಂದ ಒಂದು ಬಾರಿ, ಜನತಾದಳದಿಂದ ಒಂದು ಬಾರಿ ಒಟ್ಟು ನಾಲ್ಕು ಬಾರಿ ಗೆದ್ದಿದ್ದರೂ ಒಂದೇ ಪಕ್ಷದಿಂದ ಸತತವಾಗಿ ಎರಡು ಬಾರಿ ಗೆದ್ದಿಲ್ಲ. ಹಾಲಿ ಶಾಸಕ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಎರಡು ಬಾರಿ ಗೆದ್ದರೂ ಸತತವಾಗಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಕ್ಷೇತ್ರದ ಮತದಾರರ ನಿರ್ಧಾರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಉಪಚುನಾವಣೆ ನಡೆದಿದ್ದು ಚಿಕ್ಕಮಗಳೂರಿನ ತರೀಕೆರೆಯಲ್ಲಿ
Advertisement
Advertisement
ಸಿಂಧನೂರು ಕ್ಷೇತ್ರದಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬರುವುದಿಲ್ಲ, ಬಂದರೂ ಕ್ಷೇತ್ರದಲ್ಲಿ ಗೆದ್ದವರು ಮಂತ್ರಿಯಾಗಲ್ಲ ಅನ್ನೋ ಶಾಪದ ರೀತಿಯ ಪರಸ್ಥಿತಿಯಿತ್ತು. 2018 ರವರೆಗೂ ಸಿಂಧನೂರು ಕ್ಷೇತ್ರದಿಂದ ಗೆದ್ದವರಿಗೆ ಮಂತ್ರಿಸ್ಥಾನವೇ ಸಿಕ್ಕಿರಲಿಲ್ಲ. 2018 ರಲ್ಲಿ ಗೆದ್ದ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಯಾಬಿನೆಟ್‌ನಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗುವ ಮೂಲಕ ಕ್ಷೇತ್ರ ಒಂದು ರೀತಿಯಲ್ಲಿ ಶಾಪಮುಕ್ತವಾಯಿತು.
Advertisement
ಮತದಾರರ ಸಂಖ್ಯೆ ಎಷ್ಟು?
ಲಿಂಗಾಯತ– 45,000
ಕುರುಬರು- 35,000
ಪರಿಶಿಷ್ಟ ಜಾತಿ- 25,000
ಪರಿಶಿಷ್ಟ ಪಂಗಡ– 22,000
ಮುಸ್ಲಿಂ– 33,000
ಬಂಗ್ಲಾ ವಲಸಿಗರು– 16,000 ಹಾಗೂ ಇತರೆ ಜಾತಿಯ ಮತದಾರರಿದ್ದಾರೆ
ಒಟ್ಟು ಮತದಾರರ ಸಂಖ್ಯೆ – 2,36,943
Advertisement
ಈ ಬಾರಿಯೂ ಕಣದಲ್ಲಿ ಜಿದ್ದಾಜಿದ್ದಿಯಿದ್ದೂ ಯಾವುದೇ ಪಕ್ಷಕ್ಕೂ ಸುಲಭ ಜಯ ಸಿಗುವುದಿಲ್ಲ. ಜೆಡಿಎಸ್‌ನಿಂದ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಕಣಕ್ಕೆ ಇಳಿಯುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ಇದೆ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಕೆ.ಕರಿಯಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜೇಶ್ ಹಿರೇಮಠ್, ಅಮರೆಗೌಡ ವಿರುಪಾಪೂರ ಸೇರಿ ಹಲವು ಹೆಸರುಗಳು ಕೇಳಿಬರುತ್ತಿವೆ. ಗಾಲಿ ಜನಾರ್ಧನರೆಡ್ಡಿಯ ಕೆಆರ್‌ಪಿ ಪಕ್ಷದಿಂದ ನೆಕ್ಕುಂಟಿ ಮಲ್ಲಿಕಾರ್ಜುನ ಕಣಕ್ಕಿಳಿಯಲಿದ್ದಾರೆ.
ಒಮ್ಮೆ ಗೆದ್ದ ಪಕ್ಷ ಮತ್ತೊಮ್ಮೆ ಇಲ್ಲಿ ಗೆಲ್ಲುವುದಿಲ್ಲ ಎಂಬ ನಂಬಿಕೆ ಈ ಬಾರಿಯೂ ನಿಜವಾಗುತ್ತಾ ಅಥವಾ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಗೆದ್ದು ಅದನ್ನ ಸುಳ್ಳು ಮಾಡುತ್ತಾರಾ ಅನ್ನೋದು ಕ್ಷೇತ್ರದ ಕುತೂಹಲ. ಲಿಂಗಾಯತ, ಕುರುಬ ಸಮಾಜ ಹಾಗೂ ಮುಸ್ಲಿಂ ಅಲ್ಪಸಂಖ್ಯಾತ ಮತಗಳೇ ಇಲ್ಲಿ ನಿರ್ಣಾಯಕ. ಸಿಂಧನೂರು ತಾಲೂಕಿನಲ್ಲಿ ಕುರುಬ ಸಮಾಜದ ಪ್ರಮುಖ ಮುಖಂಡ ಕೆ. ಕರಿಯಪ್ಪ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದೆ ಅನ್ಯ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಇರುವುದರಿಂದ ಮತದಾರರ ಒಲವು ಯಾವ ಕಡೆಯಿದೆ ಎನ್ನುವುದೇ ನಿಗೂಢ. ಇದುವರೆಗೆ 8 ಬಾರಿ ಗೆದ್ದಿರುವ ಕಾಂಗ್ರೆಸ್ ಮತ್ತೊಮ್ಮೆ ಗೆಲುವಿನ ನಗೆ ಬೀರುತ್ತಾ? ಬಿಜೆಪಿ ಅಚ್ಚರಿಯ ರೀತಿಯಲ್ಲಿ ತನ್ನ ಖಾತೆಯನ್ನ ತೆರೆಯುತ್ತಾ ಎಂಬ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಉತ್ತರ ಸಿಗಲಿದೆ.