ಹಾಸನ: ಅರಸೀಕೆರೆ ಕ್ಷೇತ್ರದಲ್ಲಿ ಯಾವ ಶಾಸಕರು ಸತತವಾಗಿ ಎರಡು ಬಾರಿ ಆಯ್ಕೆಯಾಗಿರಲಿಲ್ಲ. ಈ ದಾಖಲೆಯನ್ನು ಮುರಿದವರೇ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ.
ಹಾಸನ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಿವಲಿಂಗೇಗೌಡ (KL Shivalinge Gowda) ನಂತರ ಗಂಡಸಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು. 2001-2006 ರ ತನಕ ಹಾಸನ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲೇ (2004) ಜೆಡಿಎಸ್‌ನಿಂದ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದು ಪರಾಭವಗೊಂಡರು.
Advertisement
ಕ್ಷೇತ್ರ ಪುನರ್‌ವಿಂಗಡಣೆಯ ಮೊದಲು ಗಂಡಸಿ ಕ್ಷೇತ್ರದಿಂದ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರು, ಕಾಂಗ್ರೆಸ್‌ನ (Congress) ಬಿ.ಶಿವರಾಂ ವಿರುದ್ಧ ಕೇವಲ 18 ಮತಗಳ ಅಂತರದಲ್ಲಿ ಸೋಲು ಕಂಡರು. ಬಿ.ಶಿವರಾಂ 52,781 ಮತ ಪಡೆದರೆ, ಶಿವಲಿಂಗೇಗೌಡ 52,763 ಮತಗಳಿಸಿದರು.
Advertisement
Advertisement
2008 ರಲ್ಲಿ ಅರಸೀಕೆರೆ ವಿಧಾನಸಭಾ (Arsikere Constituency) ಕ್ಷೇತ್ರದಿಂದ ಕಣಕ್ಕಿಳಿದ ಗೌಡರು 74,226 ಮತಗಳನ್ನು ಪಡೆದು 34,226 ಮತಗಳ ಅಂತರದಿಂದ ಗೆದಿದ್ದರು. 2013ರ ಚುನಾವಣೆಯಲ್ಲೂ 76,579 ಮತಗಳನ್ನು ಪಡೆದು 29,631 ಮತಗಳ ಅಂತರದಿಂದ ಜಯಶಾಲಿಯಾದರು.
Advertisement
2018 ರ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಸ್ಪರ್ಧೆಗಿಳಿದ ಕೆಎಂಶಿ, ದಾಖಲೆಯ 93,386 ಮತ ಪಡೆದು 43,089 ಮತಗಳ ಅಂತರದಿಂದ ಹ್ಯಾಟ್ರಿಕ್ ಜಯ ಸಾಧಿಸಿದರು. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಶಾಸಕರು ಎಂಬ ದಾಖಲೆ ಕೆಎಂಶಿ ಅವರ ಹೆಸರಿನಲ್ಲಿದೆ.
ಅರಸೀಕೆರೆ ವಿಧಾನಸಭೆ ಕ್ಷೇತ್ರದ ಇತಿಹಾಸದಲ್ಲೇ ಅಭಿವೃದ್ಧಿ ಕೆಲಸಗಳಿಂದಲೇ ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮೂರು ಬಾರಿ ಶಾಸಕರಾಗಿ ದಾಖಲೆ ಬರೆದಿದ್ದಾರೆ. ಈ ಕ್ಷೇತ್ರದಲ್ಲಿ ಶಿವಲಿಂಗೇಗೌಡ ಅವರನ್ನು ಹೊರತು ಪಡಿಸಿ ಉಳಿದ ಯಾರೂ ಕೂಡ ಈವರೆಗೆ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ. ಇದನ್ನೂ ಓದಿ: ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ, ಇದು ನಮಗೆ ಬೇಕಾಗಿಲ್ಲ: ಡಿಕೆಶಿ ಕಿಡಿ
ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿದ್ದ ಕ್ಷೇತ್ರದ 538 ಹಳ್ಳಿಗಳಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದ್ದಾರೆ. ವೀರಶೈವ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದರೂ, ಅವರ ಜೊತೆಗೆ ಎಲ್ಲ ಸಮುದಾಯದ ವಿಶ್ವಾಸ ಪಡೆದು ಶಿವಲಿಂಗೇಗೌಡ ಜಯಗಳಿಸಿದ್ದಾರೆ. ಈ ಮೂಲಕ ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದಲೇ ಗೆದ್ದ ನಾಯಕ ಎನಿಸಿಕೊಂಡಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಯಾವುದೇ ಯೋಜನೆಗಳಿರಲಿ ವಿಧಾನಸಭೆ ಅಧಿವೇಶನದಲ್ಲಿ ನಿಂತು ಗ್ರಾಮೀಣ ಸೊಗಡಿನಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ 2023 ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿ ಕಣಕ್ಕಿಳಿಯಲು ಸಜ್ಜಾಗಿರುವ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷ ತೊರೆದಿದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಇವರನ್ನು ಸೊಲಿಸಲೇಬೇಕೆಂದು ಜೆಡಿಎಸ್ ಪಣ ತೊಟ್ಟಿದೆ.
ಮಂಜೇಗೌಡ-ದ್ಯಾವಮ್ಮ ದಂಪತಿ ಪುತ್ರನಾಗಿ 1958ರ ಫೆಬ್ರವರಿ 14 ರಂದು ಕುಡಕುಂದಿ ಗ್ರಾಮದಲ್ಲಿ ಜನಿಸಿದ ಶಿವಲಿಂಗೇಗೌಡ ಬಿಎ ಪದವಿ ಪಡೆದು ವ್ಯವಸಾಯ ಮಾಡಿಕೊಂಡಿದ್ದರು. ನಂತರ ಶಿವಲಿಂಗೇಗೌಡ ಸಣ್ಣ ಗುತ್ತಿಗೆದಾರನಾಗಿ ಹೊಸ ವೃತ್ತಿ ಆರಂಭಿಸಿ ಎಚ್.ಡಿ.ಪುಷ್ಪವತಿ ಅವರ ಕೈ ಹಿಡಿದರು.
ಶಿವಲಿಂಗೇಗೌಡರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ. ಇಬ್ಬರು ಹೆಣ್ಣು ಮಕ್ಕಳನ್ನು ತಾವೇ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಡುವ ಮೂಲಕ ಸರಳತೆ ಮೆರೆದಿದ್ದಾರೆ.