ದೋಸ್ತಿ ಸರ್ಕಾರ ಉರುಳುತ್ತಾ? ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಏನೆಲ್ಲ ‘ಮ್ಯಾಜಿಕ್’ ನಡೆಯಬೇಕು?

Public TV
3 Min Read
bjp operation

ಬೆಂಗಳೂರು: ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ವಾಪಸ್ ಪಡೆದ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ಉಳಿಯುತ್ತಾ? ಉರುಳುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ರಾಣೇಬೆನ್ನೂರಿನ ಆರ್.ಶಂಕರ್, ಮುಳಬಾಗಿಲು ಶಾಸಕ ನಾಗೇಶ್ ಅವರು ಬೆಂಬಲ ವಾಪಸ್ ಪಡೆದರೂ ಸದ್ಯಕ್ಕೆ ಕಾಂಗ್ರೆಸ್- ಜೆಡಿಎಸ್ ಸರ್ಕಾರಕ್ಕೆ ಏನು ಆಗುವುದಿಲ್ಲ. ಯಾಕೆಂದರೆ ಸದ್ಯ ದೋಸ್ತಿ ಸರ್ಕಾರಕ್ಕೆ 118 ಶಾಸಕರ ಬೆಂಬಲವಿದ್ದು ಸುಭದ್ರವಾಗಿದೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

JDS COngress 3

ಲೆಕ್ಕಾಚಾರ ಹೇಗೆ?
ವಿಧಾನಸಭೆಯ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯಾ ಬಲ 224 ಆಗಿದ್ದು ಪ್ರಸ್ತುತ ಕಾಂಗ್ರೆಸ್ 80, ಜೆಡಿಎಸ್ 37 ಬಿಎಸ್‍ಪಿ 1, ಬಿಜೆಪಿ 104 ಶಾಸಕರನ್ನು ಹೊಂದಿದೆ. ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ತನ್ನ ಬಲವನ್ನು 106ಕ್ಕೆ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‍ಪಿಯ ಒಬ್ಬ ಶಾಸಕರನ್ನು ಒಳಗೊಂಡಂತೆ ಮೈತ್ರಿ ಸರ್ಕಾರ 118 ಜನ ಶಾಸಕರನ್ನು ಹೊಂದಿದೆ. ಈ ಸಂಖ್ಯೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಇದ್ದಾರೆ. ಇದನ್ನೂ ಓದಿ: ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

dks hdk congress jds 1

ಎರಡನೇ ಹಂತದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ನೀಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. 118 ಶಾಸಕರಲ್ಲಿ 6 ಮಂದಿ ರಾಜೀನಾಮೆ ನೀಡಿದರೂ 112 ಶಾಸಕರ ಬೆಂಬಲ ಇರುವ ಕಾರಣ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಹೀಗಾಗಿ 106 ಶಾಸಕರ ಬೆಂಬಲ ಹೊಂದಿರುವ ಬಿಜೆಪಿ ಅಧಿಕಾರದ ಚುಕ್ಕಾಣೆ ಹಿಡಿಯಲು ಸಾಧ್ಯವಿಲ್ಲ.

ಬಿಜೆಪಿ ಅಧಿಕಾರಕ್ಕೆ ಏರುತ್ತಾ?
ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಕನಿಷ್ಟ 13 ಮಂದಿ ರಾಜೀನಾಮೆ ನೀಡಬೇಕಾಗುತ್ತದೆ. ನೀಡಿದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು. 13 ಮಂದಿ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಸಂಖ್ಯೆ 105ಕ್ಕೆ ಕುಸಿಯುತ್ತದೆ. ಹೀಗಾಗಿ 106 ಶಾಸಕರ ಬೆಂಬಲದೊಂದಿಗೆ ಬಿಜೆಪಿ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಒತ್ತಾಯಿಸುತ್ತದೆ. ಇದನ್ನೂ ಓದಿ: ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು ಯಾಕೆ: ಕಾರಣ ಕೊಟ್ಟ ಪಕ್ಷೇತರರು

JDS CONGRESS

ಈ ರೀತಿಯ ಎಲ್ಲ ಕಸರತ್ತು ನಡೆದ ಬಳಿಕ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಕನಿಷ್ಟ 7 ಕ್ಷೇತ್ರಗಳಲ್ಲಿ ಗೆದ್ದಲ್ಲಿ ಮಾತ್ರ ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತದೆ. 7 ಕ್ಷೇತ್ರಗಳಲ್ಲಿ ಗೆದ್ದಲ್ಲಿ ಬಿಜೆಪಿ ಬೆಂಬಲಿಸುವ ಶಾಸಕರ ಸಂಖ್ಯೆ 113ಕ್ಕೆ ಏರಲಿದೆ. ಕರ್ನಾಟಕ ವಿಧಾನಸಭೆಯಲ್ಲಿ ಸರ್ಕಾರ ಸಾಬೀತು ಪಡಿಸಲು ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 113 ಆಗಿದೆ.

ಲೋಕಸಭಾ ಚುನಾವಣೆಯ ಜೊತೆ ಉಪಚುನಾವಣೆ?
ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರ ಖಾಲಿಯಾದ 6 ತಿಂಗಳ ಒಳಗಡೆ ಚುನಾವಣೆ ನಡೆಯಬೇಕು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನು ಗೆದ್ದಕೊಂಡ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ಶಾಸಕರು ರಾಜೀನಾಮೆ ನೀಡಿದ ಕ್ಷೇತ್ರಗಳಲ್ಲೂ ಒಂದು ವೇಳೆ ಉಪ ಚುನಾವಣೆ ನಡೆದರೆ ನಮಗೆ ವರವಾಗಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡು ಈ ಆಪರೇಷನ್ ಕಮಲ ನಡೆಸಲು ಹೈಕಮಾಂಡ್ ಒಪ್ಪಿಗೆ ನೀಡಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

CONGI JDS

ಕುಮಾರಸ್ವಾಮಿ ಅವರು ಈ ಹಿಂದೆ ಬಹುಮತ ಸಾಬೀತು ಪಡಿಸಿದ್ದರು. ಒಂದು ಬಾರಿ ಬಹುಮತವನ್ನು ಸಾಬೀತುಪಡಿಸಿದ ನಂತರ ಸರ್ಕಾರದ ಶಾಸಕರು ರಾಜೀನಾಮೆ ನೀಡಿದರೂ 6 ತಿಂಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ. ಈಗ 6 ತಿಂಗಳು ಮುಗಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಕ್ರಾಂತಿಯಂದೇ ರಾಜ್ಯ ರಾಜಕಾರಣದಲ್ಲಿ `ಸಮ್’ ಕ್ರಾಂತಿ ಮಾಡತೊಡಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *