Monday, 19th August 2019

Recent News

ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

– ಪಕ್ಷೇತರ ಶಾಸಕರ ಹೊಣೆಯನ್ನ ನಾನು ಹೊತ್ತಿಲ್ಲ

ಬೆಂಗಳೂರು: ಸರ್ಕಾರ ಹೇಗೆ ಉಳಿಸಿಕೊಳ್ಳಬೇಕು ಅಂತ ನನಗೆ ಗೊತ್ತಿದೆ. ನನಗೆ ಯಾವ ಭಯವಿಲ್ಲ. ಆದರೆ ಮಾಧ್ಯಮಗಳೇ ಆತಂಕ ಸೃಷ್ಟಿಸುತ್ತಿವೆ ಎಂದು ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.

ನಗರದ ಕೆಕೆ ಗೆಸ್ಟ್ ಹೌಸ್ ಬಳಿ ಮಾತನಾಡಿದ ಸಿಎಂ, ನನ್ನ ಸರ್ಕಾರದ ಶಕ್ತಿ ಎಷ್ಟಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಪಕ್ಷೇತರ ಶಾಸಕರು ಹೋದ ತಕ್ಷಣ ಸರ್ಕಾರ ಬೀಳುವುದಿಲ್ಲ. ಮಾಧ್ಯಮಗಳೇ ಈ ಸರ್ಕಾರದ ಬಗ್ಗೆ ತೀರ್ಮಾನ ಮಾಡುತ್ತಿವೆ. ಆಪರೇಷನ್ ಕಮಲದ ಸುದ್ದಿ ಹಾಕಿದವರು ನೀವು, ಈಗ ನೀವೇ ನನಗೆ ಮಾಹಿತಿ ಕೊಡಬೇಕು. ನಿಮ್ಮ ನ್ಯೂಸ್‍ಗಳಿಗೆ ನನ್ನ ಬಲಿ ಕೊಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಆಪರೇಷನ್ ಕಮಲಕ್ಕೆ ನಾನೇಕೆ ಪ್ರತಿಕ್ರಿಯೆ ನೀಡಬೇಕು? ಸರ್ಕಾರಕ್ಕೆ ಬೇಕಾಗಿರುವ ಬೆಂಬಲ ಎಷ್ಟು? ನನ್ನ ಬಲ ಏನು ಎನ್ನುವುದು ನನಗೆ ಗೊತ್ತಿದೆ. ಮೈತ್ರಿ ಸರ್ಕಾರ ಬಂಡೆಗಲ್ಲು ಇದ್ದಂತೆ. ನಿಮಗೇಕೆ ನನ್ನ ಸರ್ಕಾರದಲ್ಲಿ ಬಗ್ಗೆ ಚಿಂತೆ? ಕಳೆದ ಒಂದು ವಾರದಿಂದ ಆಪರೇಷನ್ ಕಮಲದ ಕುರಿತಾಗಿಯೇ ಹೇಳುತ್ತಿದ್ದೀರಿ. ನೀವೇ ಸರ್ಕಾರ ಬೀಳಿಸುವ ದಿನಾಂಕ ನಿಗದಿ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಮುಳಬಾಗಿಲು ನಾಗೇಶ್ ಅವರ ಹೊಣೆಯನ್ನು ನಾನು ಹೊತ್ತಿಲ್ಲ. ನನ್ನ ಸರ್ಕಾರ ರಚನೆಯಾಗಿರುವುದು ಕಾಂಗ್ರೆಸ್‍ನ ಬೆಂಬಲದೊಂದಿಗೆ. ಪಕ್ಷೇತರ ಶಾಸಕರು ಬೆಂಬಲ ಹಿಂದಕ್ಕೆ ಪಡೆದರೂ ನಮ್ಮ ಸರ್ಕಾರ ಭದ್ರವಾಗಿರುತ್ತದೆ ಎಂದು ಹೇಳಿದರು.

ಎರಡು ಜನ ಶಾಸಕರು ಬೆಂಬಲ ವಾಪಸ್ ಪಡೆದ ಕಾರಣ ಸರ್ಕಾರಕ್ಕೆ ಏನು ಆಗುವುದಿಲ್ಲ. ಬೆಂಬಲ ವಾಪಸ್ ಪಡೆದ ಮೇಲೆ ಅವರು ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಯಾಕೆ ಹೀಗೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಸರ್ಕಾರಕ್ಕೆ ಸುಮ್ಮನಿರಲು ಬಿಡಿ. ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಿಮಗೆ ಯಾವ ರೀತಿ ಬೇಕೋ ಆ ರೀತಿ ಸುದ್ದಿ ಮಾಡಿಕೊಳ್ಳಿ ನಿಮ್ಮ ಇಷ್ಟ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಕೋಪ ತೋರಿಸಿದರು.

ನ್ಯೂಸ್ ಚಾನೆಲ್‍ಗಳು ಧಾರಾವಾಹಿಗಳಂತೆ ಸುದ್ದಿ ಪ್ರಸಾರ ಮಾಡುತ್ತಿವೆ. ನಾವು ಆ ಧಾರಾವಾಹಿ ಸರಣಿಗಳನ್ನು ನೋಡುತ್ತೇವೆ. ನೀವು ಪ್ರಸಾರ ಮಾಡಿ ಎಂದು ಮಾಧ್ಯಮಗಳ ವಿರುದ್ಧ ವ್ಯಂಗ್ಯವಾಡಿದರು. ಈ ವೇಳೆ ಶಾಸಕ ಆನಂದ್ ಸಿಂಗ್ ಹಾಗೂ ಸಚಿವ ಜಮೀರ್ ಅಹ್ಮದ್ ಸಿಎಂ ಕುಮಾರಸ್ವಾಮಿ ಜೊತೆಗೆ ಇದ್ದರು.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *