ಮಂಡ್ಯ: ರಾಜ್ಯಸರ್ಕಾರದ ಬಜೆಟ್ ನೀರಸ ಬಜೆಟ್ ಆಗಿದ್ದು, ಯಾವುದೇ ಹೊಸ ಯೋಚನೆಗಳು, ಆಲೋಚನೆಗಳು ಇದರಲ್ಲಿ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಂದಿನ ಬಜೆಟ್ ಮೇಲೆ ರೈತರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಅವೆಲ್ಲವೂ ಈ ಸರ್ಕಾರ ಹುಸಿಗೊಳಿಸಿದೆ. ಮಂಡ್ಯ ಜಿಲ್ಲೆಗೆ ಈ ಬಜೆಟ್‍ನಿಂದ ಯಾವುದೇ ರೀತಿಯಾದ ಉಪಯೋಗವಾಗಿಲ್ಲ ಎಂದು ಟೀಕಿಸಿದರು.
ಮೈಸೂರು ಸಕ್ಕರೆ ಕಾರ್ಖಾನೆಗೆ ನೀಡಿರುವ 50 ಕೋಟಿ ರೂ. ಅನುದಾನ ಸಾಲದು, ಮುಖ್ಯಮಂತ್ರಿಗಳು ಇದರ ಬಗ್ಗೆ ಪರಾಮರ್ಶಿಸಿ ಅನುದಾನವನ್ನು ಹೆಚ್ಚಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸವಂತಹ ಯಾವುದೇ ಯೋಜನೆಗಳನ್ನೂ ಘೋಷಿಸದೇ ಇರುವುದು ನಿರಾಸೆ ತಂದಿದೆ. ಬೆಂಬಲ ಬೆಲೆ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡಿಲ್ಲ. ನಮ್ಮದು ರೈತಪರ ಸರ್ಕಾರ ಎಂದು ಹೇಳಿದರೆ ಸಾಲದು ಅದರಂತೆ ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್: ಆರ್. ಅಶೋಕ್
ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಂದರ್ಭದಲ್ಲಿ ಬೆಳೆ ನಷ್ಟಕ್ಕೆ ಒಳಗಾಗುವ ರೈತರಿಗೆ ಕೆಲವು ಸಂದರ್ಭದಲ್ಲಿ ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಹೀಗೆ ಬೆಲೆ ಕುಸಿತವಾದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಇದಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಹೀಗಾಗಿ ಸರ್ಕಾರ ಬೆಂಬಲ ಬೆಲೆಗೆ ಹಣವನ್ನು ಘೋಷಣೆ ಮಾಡಬೇಕಿದೆ. ಅಲ್ಲದೆ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಪಟ್ಟಂತೆ ನಡೆಯುವ ಅವಘಡಗಳಿಗೆ ನಿಧಿ ಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಆದರೂ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ