ಬೆಂಗಳೂರು: ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಯುನೈಟೆಡ್ ಕಿಂಗ್ಡಮ್ (UK) ನಡುವಿನ ಸಹಕಾರವನ್ನು ಬಲಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ಜಂಟಿ ನಾವೀನ್ಯತಾ ಕಾರ್ಯಕ್ರಮಗಳು, ಶ್ರೇಷ್ಠತಾ ಕೇಂದ್ರಗಳು ಹಾಗೂ ಪ್ರಾಯೋಗಿಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲಯನ್ಸ್ ಮೂಲಕ ಈ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಯೋಜಿಸಲಾಗಿದೆ. ಜಂಟಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸರ್ಕಾರಗಳ ನಡುವಿನ ಸಹಭಾಗಿತ್ವದ ಮೂಲಕ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸುವುದು ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಯುಕೆನ ಯಾರ್ಕ್ ಮತ್ತು ನಾರ್ತ್ ಯಾರ್ಕ್ಷೈರ್ ಪ್ರದೇಶಗಳ ಮೇಯರ್ ಡೇವಿಡ್ ಸ್ಕೈತ್ ಅವರೊಂದಿಗೆ ನಡೆದ ಸಭೆಯ ಬಳಿಕ ಪ್ರಿಯಾಂಕ್ ಖರ್ಗೆ ಈ ಮಾಹಿತಿ ನೀಡಿದ್ದಾರೆ. ಎರಡೂ ಕಡೆಯ ಸಂಸ್ಥೆಗಳನ್ನು ಗುರುತಿಸಿ, ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಶೀಘ್ರ ಆರಂಭಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಸಭೆಯ ಬಳಿಕ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಯುನಿವರ್ಸಿಟಿ ಆಫ್ ಯಾರ್ಕ್ ನಡುವೆ ಸಹಕಾರದ ಉದ್ದೇಶ ಪತ್ರಕ್ಕೆ ಸಹಿ ಹಾಕಲಾಗಿದೆ.
ಸ್ಟಾರ್ಟ್ಅಪ್ಗಳಿಗೆ ಹೊಸ ಅವಕಾಶ
ಈ ಒಡಂಬಡಿಕೆಯಿಂದ ಸಂಶೋಧನೆ, ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ಗಳಿಗೆ ಮಾರುಕಟ್ಟೆ ಪ್ರವೇಶ ಕಲ್ಪಿಸುವ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಾಗಲಿದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಂಪರ್ಕವನ್ನೂ ಬಲಪಡಿಸಲು ಯೋಜಿಸಲಾಗಿದೆ.
ಜೈವಿಕ ಆರ್ಥಿಕತೆ, ಸ್ವಚ್ಛ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಹಾಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರಮುಖ ಸಹಕಾರದ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಇದನ್ನೂ ಓದಿ: ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಯತ್ನ – ಅಭಿಮಾನಿ ಹುಚ್ಚಾಟ
ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಗೆ ಒತ್ತು
ಯಾರ್ಕ್ ಮತ್ತು ನಾರ್ತ್ ಯಾರ್ಕ್ಷೈರ್ ಪ್ರದೇಶಗಳು ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಹಾಗೂ ಸ್ವಚ್ಛ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿವೆ. ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್ಅಪ್ಗಳು ಮತ್ತು ಎಂಜಿನಿಯರಿಂಗ್ ಪ್ರತಿಭೆಗಳಿಗೆ ಹೆಸರುವಾಸಿಯಾಗಿದೆ.
ಎರಡೂ ಪ್ರದೇಶಗಳ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿ ಸಂಶೋಧನೆಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ರೂಪಿಸುವುದು ಹಾಗೂ ಹೊಸ ವಾಣಿಜ್ಯ ಅವಕಾಶಗಳನ್ನು ಸೃಷ್ಟಿಸುವುದು ಈ ಸಹಕಾರದ ಉದ್ದೇಶವಾಗಿದೆ. ವಿಶೇಷವಾಗಿ ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸಿ ಆರ್ಥಿಕ ಮೌಲ್ಯ ಸೃಷ್ಟಿಸುವ ಕ್ಷೇತ್ರಕ್ಕೂ ಆದ್ಯತೆ ನೀಡಲಾಗುತ್ತದೆ.
ಜಲ ಸಂಪನ್ಮೂಲದಿಂದ ಪೊಲೀಸ್ ವ್ಯವಸ್ಥೆಯವರೆಗೆ ಚರ್ಚೆ
ಸಭೆಯಲ್ಲಿ ಸುಸ್ಥಿರತೆ, ಜಲ ಸಂಪನ್ಮೂಲ ನಿರ್ವಹಣೆ, ಸಾರಿಗೆ, ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ.
ಮುಂದಿನ ಹಂತದಲ್ಲಿ ಕೆಲವು ಆದ್ಯತೆಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು, ಜಂಟಿ ಪ್ರಾಯೋಗಿಕ ಯೋಜನೆಗಳು, ಸಂಶೋಧನಾ ಸಹಯೋಗ, ಸ್ಟಾರ್ಟ್ಅಪ್ಗಳ ನಡುವಿನ ಸಂಪರ್ಕ ಹಾಗೂ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಪೂರಕವಾದ ಕಾರ್ಯಚೌಕಟ್ಟು ರೂಪಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: `ಜೈಲರ್ 2′ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್ ಮಾಡಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್
