ಒಲವಿನ ಗೆಳೆಯ
ನೀನು ನನಗೆ ಬರೆದ ಪತ್ರ ಓದಿ ತುಂಬಾ ಖುಷಿ ಆಯ್ತು.. ಯಾಕೋ ಏನೋ ಅಷ್ಟೇ ಬೇಜಾರ್ ಆಯ್ತು. ಇಷ್ಟು ದಿನ ಆದ್ರೂ ನನ್ನನ್ನ ನೀನು ನೆನಪಿಟ್ಕೊಂಡಿದಿಯಲ್ಲ. ನನ್ನನ್ನ ಮರೆಯೋದಿಲ್ವಾ ನೀನು?
ನಾನಂತೂ ನಿನ್ನನ್ನ ಮರೆತಿದಿನಿ. ನೀನೇ, ತುಂಬಾ ನಂಬಿಸಿ ನಡು ನೀರಲ್ಲಿ ಕೈ ಬಿಟ್ಟವಳ ನೆನಪಲ್ಲೇ ಇನ್ನೂ ಒಬ್ಬೊಂಟಿಯಾಗಿರೋದು. ಮೋಸ ಮಾಡಿ ಹೋದವಳ ಮೇಲೆ ಯಾಕೋ ನಿನಗೆ ಅಷ್ಟೊಂದು ಪ್ರೀತಿ? ಈಗೀಗ ನಿನ್ನ ದ್ವೇಷವನ್ನಾದ್ರೂ ನಾನು ಸಹಿಸಬಲ್ಲೇ, ನಿನ್ನ ಪ್ರೇಮವನ್ನ ಸಹಿಸೋಕೆ ನನ್ನಿಂದ ಆಗ್ತಿಲ್ಲ ಕಣೋ. ಇದನ್ನೂ ಓದಿ: ನೀನು ಮತ್ತೆ ನನ್ನೆದೆಗೆ ಬಂದಂತ ಕನಸೊಂದು.. ನನಸಾಗಿದ್ದರೆ..!

ಮೊದಲು ನೀನು ಮದುವೆ ಆಗು, ಎಲ್ಲಾ ಸರಿ ಆಗುತ್ತೆ. ಇನ್ನೂ ಎಷ್ಟು ದಿನ ಅಂತ ಒಬ್ಬನೇ ಇರ್ತಿಯಾ? ನನಗಾಗಿ ಇಷ್ಟು ವರ್ಷ ನೀನು ಮದುವೆ ಆಗದೇ ಪರಿತಪಿಸಿದ್ದು ಸಾಕು. ಇನ್ನಾದ್ರೂ ನಿನ್ನ ಬದುಕನ್ನ ನೀನು ನೋಡ್ಕೋಳ್ಬಾರದಾ? ನೀನು ಇನ್ನೂ ಹೀಗೆ ಒಬ್ಬೊಂಟಿಯಾಗಿ ಇರೋದು ನೋಡಿದ್ರೆ ನನಗೆ ತುಂಬಾ ಸಂಕಟ ಆಗುತ್ತೆ ಕಣೋ. ನಾನು ನಿನಗೆ ಮೋಸ ಮಾಡ್ಬಿಟ್ಟೆ ಅನ್ನೋ ನೋವು ಕ್ಷಣ ಕ್ಷಣಕ್ಕೂ ನನ್ನನ್ನ ಚುಚ್ಚತ್ತೆ. ದಿನ ಇದೇ ರೀತಿ ನಾನು ಕೊರಗೋದು ನಿನಗೆ ಇಷ್ಟಾನಾ ಹೇಳು?
ನಾನು ಮಾತ್ರ ಎಲ್ಲೇ ಇದ್ರೂ ಖುಷಿಯಾಗಿರಬೇಕು ಅಂತ ನೀನು ಬರೆದಿದಿಯಲ್ಲ, ಅದೇ ರೀತಿ ಆಸೆ ನನಗೂ ಇರೋದಿಲ್ವಾ? ನೀನು ಖುಷಿಯಿಂದ ಇರಬೇಕು ಕಣೋ. ಅದಕ್ಕೆ ನಿನ್ನ ಮದುವೆ ಒಂದೇ ಪರಿಹಾರ ಅಂತ ನನಗನ್ನಿಸ್ತಿದೆ. ನನ್ನ ಮಾತು ನೀನು ಕೇಳ್ಬೇಕು ಅಷ್ಟೇ..! ಇದು ನಿನ್ನ ಪ್ರೀತಿಯ ಕೋಪಿಷ್ಠೆಯ ಆರ್ಡರ್ ಅಂತಾನೇ ಅಂದ್ಕೋ ಪರವಾಗಿಲ್ಲ.
ನಿನ್ನನ್ನ ನಾನು ಜೀವಕ್ಕಿಂತ ಹೆಚ್ಚು ಪ್ರೀತ್ಸಿದ್ದೆ ನಿಜ, ನಿನಗೆ ಮೋಸ ಮಾಡಿ ದೂರ ಆಗಿದ್ದು ನಿಜ, ಅದರಾಚೆ ನಿನಗೊಂದು ಬದುಕಿದೆ ಅನ್ನೋದು ನಿಜ ಅಲ್ವಾ?

ದಾರಿಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಒಂದು ಮುಳ್ಳು ಚುಚ್ಚಿ ಬಿಡುತ್ತೆ, ಎಷ್ಟು ದೂರ ಅಂತ ಅದನ್ನ ಅಂಗಾಲಲ್ಲೇ ಇಟ್ಕೊಂಡು ಸಾಗೋದು? ಹಾಗೇ ಹೃದಯಕ್ಕೆ ಇರಿದ ಮೋಸದ ಕತ್ತಿಯನ್ನ ಎಷ್ಟು ದಿನ ಅಂತ ಇಟ್ಕೋತಿಯಾ. ಅದನ್ನೂ ತೆಗೆದು ಮುಂದೆ ಹೋಗ್ಬೇಕಲ್ವಾ?
ನಿನ್ನನ್ನ ನೋಡಿದ್ದು, ಮಾತಾಡಿದ್ದು, ಜೀವಕ್ಕಿಂತ ಹೆಚ್ಚಾಗಿ ಹಚ್ಕೊಂಡಿದ್ದು ಅದೆಲ್ಲ ಈಗ ನೆನಪು ಮಾತ್ರ. ಆ ನೆನಪು ಅದರ ಪಾಡಿಗೆ ಅದು ಇರಲಿ ಬಿಡು. ಕೆಲವು ಪ್ರೇಮಿಗಳು ಒಂದಾಗದಿದ್ರೂ ಪ್ರೀತಿ ಶಾಶ್ವತ. ಆ ಸಾಲಲ್ಲಿ ನಮ್ಮಿಬ್ಬರ ಜೋಡಿಯೂ ಇರಲಿ ಬಿಡು.
ಸಮಾಜದ ಮುಂದೆ ನಾವಿಬ್ರೂ ಈಗ ಅಪರಿಚಿತರು. ಅಪರಿಚಿತರಾಗೆ ಇದ್ದು ಬಿಡೋಣ. ಆದ್ರೆ ಎದುರಿಗೆ ಸಿಕ್ಕರೆ ಒಂದು ಸ್ಮೈಲ್ ಆದ್ರೂ ಮಾಡು ನೀನು. ಮದುವೆ ವಿಚಾರದಲ್ಲಿ ನಾನು ಹೇಳಿದ್ದು ಸೀರಿಯಸ್ಸಾಗಿ ತಗೋ ಪ್ಲೀಸ್! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನ ಹೃದಯಕ್ಕೆ ಇರಿದು ನೊಂದವಳು
