ಅಂದುಕೊಂಡಂತೆ ನಡೆದರೆ ಜುಲೈ ಅಥವಾ ಆಗಸ್ಟ್ ನಲ್ಲಿ ಕನ್ನಡ (Kannada) ಬಿಗ್ ಬಾಸ್ (Bigg Boss) ಓಟಿಟಿ ಸೀಸನ್ 2 ಶುರುವಾಗಲಿದೆ ಎನ್ನುವ ಸುದ್ದಿ ಗಾಂಧಿನಗರದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಅದಕ್ಕೆ ಬೇಕಾಗುವ ಸಿದ್ಧತೆಯನ್ನು ವಾಹಿನಿ ಮಾಡಿಕೊಳ್ಳುತ್ತಿದೆ ಎನ್ನುವುದು ಸದ್ಯಕ್ಕಿರುವ ವರ್ತಮಾನ. ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಬೇಕು? ಏನೆಲ್ಲ ಟಾಸ್ಕ್ ಗಳನ್ನು ಆಡಿಸಬೇಕು, ಯಾರೆಲ್ಲ ಸ್ಪರ್ಧಿಗಳು ಇರಬೇಕು ಈ ಎಲ್ಲ ಕೆಲಸಗಳು ಭರದಿಂದ ಸಾಗುತ್ತಿವೆಯಂತೆ.
ಸುದೀಪ್ (Sudeep) ಅವರ ಆಪ್ತರು ಹೇಳುವಂತೆ ಮುಂದಿನ ತಿಂಗಳಿಂದ ಸುದೀಪ್ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಆಚೆಯೇ ಹೆಚ್ಚು ಇರಲಿದೆ. ಹಾಗಾಗಿ ಬಿಗ್ ಬಾಸ್ ಗಾಗಿ ಸುದೀಪ್ ಡೇಟ್ಸ್ ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ವೀಕೆಂಡ್ ನಲ್ಲಿ ಮಾತ್ರ ಸುದೀಪ್ ಇರುವುದರಿಂದ ಅಷ್ಟೇನೂ ಸಮಸ್ಯೆ ಆಗದು ಎನ್ನುವುದು ಮತ್ತೊಂದು ಸಮಾಧಾನ. ಇದನ್ನೂ ಓದಿ:ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಿ, ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗ್ಡೆ
ಇಷ್ಟೇ ಅಲ್ಲದೇ ಈ ಬಾರಿ ಬಿಗ್ ಬಾಸ್ ಮನೆಯೇ ಶಿಫ್ಟ್ ಆಗಿದೆ ಎನ್ನುವ ಮಾಹಿತಿಯೂ ಸೋರಿಕೆ ಆಗಿದೆ. ಪ್ರತಿ ಸಲವೂ ಬಿಗ್ ಬಾಸ್ ಮನೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುತ್ತಿತ್ತು. ಈ ಬಾರಿ ಮನೆಯನ್ನೇ ಶಿಫ್ಟ್ ಮಾಡಲಾಗಿದೆಯಂತೆ. ಬೆಂಗಳೂರಿನ ಕುಂಬಳಗೋಡು ಬಳಿ ಇರುವ ದೊಡ್ಡ ಆಲದಮರದ ಹತ್ತಿರ ಮನೆಯನ್ನು ನಿರ್ಮಾಣ ಮಾಡಲಾಗಿದೆಯಂತೆ.
ಈ ಬಾರಿಯ ಬಿಗ್ ಬಾಸ್ ಓಟಿಟಿ (OTT) ಸೀಸನ್ 2 ಬಗ್ಗೆ ಇಷ್ಟೆಲ್ಲ ಮಾಹಿತಿ ಹರಿದಾಡುತ್ತಿದ್ದರೂ, ವಾಹಿನಿಯಿಂದಾಗಲಿ ಅಥವಾ ಇದಕ್ಕೆ ಸಂಬಂಧಪಟ್ಟವರಿಂದಾಗಲಿ ಅಧಿಕೃತ ಮಾಹಿತಿ ಇಲ್ಲ. ಹಾಗಾಗಿ ವಾಹಿನಿ ಹೇಳುವವರೆಗೂ ಮತ್ತು ಇದಕ್ಕೆ ಸಂಬಂಧಿಸಿದ ಪುರಾವೆ ಸಿಗುವ ತನಕ ಇದು ಗಾಸಿಪ್ (Gossip) ಆಗಿಯೇ ಉಳಿಯಲಿದೆ.