ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ಕನಸಿನ ಪ್ರಾಜೆಕ್ಟ್ ಕಬ್ಜ ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ 25 ದಿನ. ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿರುವ ಚಿತ್ರವು 50ನೇ ದಿನದತ್ತ ಮುನ್ನುಗ್ಗಿದೆ. ಈಗಲೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಹಲವು ಭಾಷೆಗಳಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ (Kabzaa 2) ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ
ಆರ್.ಚಂದ್ರು ಅವರ ಆಪ್ತರ ಪ್ರಕಾರ ‘ಕಬ್ಜ 2’ ಸಿನಿಮಾ ಇನ್ನೂ ಅದ್ಧೂರಿಯಾಗಿ ಮತ್ತು ವಿಶೇಷ ಸಂಗತಿಗಳೊಂದಿಗೆ ರೆಡಿಯಾಗಲಿದೆಯಂತೆ. ಅಲ್ಲದೇ, ಬಾಲಿವುಡ್ ನಟರೊಬ್ಬರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರ ಸಮಾಗಮವೇ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆ ಕಲಾವಿದರನ್ನು ಮನಸ್ಸಲ್ಲಿ ಇಟ್ಟುಕೊಂಡೇ ಪಾತ್ರಗಳಿಗೆ ಜೀವ ತುಂಬಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕಾಂತಾರ ಚಿತ್ರದ ನಂತರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕಬ್ಜ ಚಿತ್ರ, ಈ ಮೂಲಕ ಆರ್.ಚಂದ್ರುಗೆ ಮತ್ತೊಂದು ಹಂತದ ಗೆಲುವನ್ನು ತಂದುಕೊಟ್ಟಿದೆ. ಭಾರತೀಯ ಸಿನಿಮಾ ರಂಗವೇ ಮಾತಾಡುವಂತಹ ನಿರ್ದೇಶಕರ ಪಟ್ಟಿಯಲ್ಲಿ ಚಂದ್ರು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಕಬ್ಜ 2 ಬಗ್ಗೆ ಈಗಾಗಲೇ ಮಾತುಗಳು ಶುರುವಾಗಿವೆ. ಈ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.
ಕಬ್ಜ ಚಿತ್ರದಲ್ಲಿ ಉಪೇಂದ್ರ (Upendra) , ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ಅನ್ನು ಮೊದಲ ಬಾರಿಗೆ ತಂದಿದ್ದ ಚಂದ್ರು, ಕಬ್ಜ 2 ನಲ್ಲಿ ಯಾರೆಲ್ಲ ಕಲಾವಿದರನ್ನು ಕೂಡಿಸಲಿದ್ದಾರೆ ಮತ್ತು ಮುಂದಿನ ಕಥೆಯ ಕಟ್ಟುವಿಕೆ ಹೇಗಿರಲಿದೆ ಎನ್ನುವ ಚರ್ಚೆ ಈಗಿನಿಂದಲೇ ಗಾಂಧಿನಗರದಲ್ಲಿ ಶುರುವಾಗಿದೆ.