ಶಿವಮೊಗ್ಗ: ಜಿಲ್ಲೆಯ ಜನರು ಸಂತೃಪ್ತಿಯಿಂದ ಅವರವರ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಶಿವಮೊಗ್ಗದ ಜನರು ಸಂತೃಪ್ತಿಯಿಂದ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಇಷ್ಟವಿಲ್ಲದಂತೆ ಕಾಣುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಮಂಗಳವಾರ ಭದ್ರಾವತಿಗೆ ಭೇಟಿ ನೀಡಿದ್ದ ವೇಳೆ ಡಿಕೆಶಿ ಅವರು ಶಿವಮೊಗ್ಗದಲ್ಲಿ ಪದೇ ಪದೆ ಗಲಾಟೆ, 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸುತ್ತಿದ್ದರೇ ಜನ ವ್ಯಾಪಾರ ವಹಿವಾಟು ಇಲ್ಲದೇ, ಬೇರೆ ಕಡೆ ಹೋಗುತ್ತಾರೆ. ಜಿಲ್ಲೆಗೆ ಯಾರೂ ಸಹ ಹೂಡಿಕೆದಾರರು ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಮಾಡಿದ ಹರ್ಷನ ಕೊಲೆ ನಂತರ, ರಾಜ್ಯ ಸರ್ಕಾರ ಕೊಲೆಗಡುಕರನ್ನು ತಕ್ಷಣ ಬಂಧಿಸಿ, ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಜಿಲ್ಲೆಯ ಜನ ಸರ್ಕಾರವನ್ನು ಅಭಿನಂದಿಸಿದ್ದಾರೆ. ಕೊಲೆಗಡುಕರ ಬಗ್ಗೆ ಗಮನಹರಿಸಿ ಎನ್ ಐಎ ತನಿಖೆಗೆ ವಹಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ ಯಾವುದೇ ಗೊಂದಲ ಇಲ್ಲ ಎಂದರು. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ
ಎಲ್ಲರೂ ಕೂಡಾ ಸಂತೃಪ್ತಿಯಿಂದ, ಸಂತೋಷದಿಂದ ಅವರವರ ವ್ಯವಹಾರ ಮಾಡಿಕೊಂಡು ಹೋಗುತ್ತಿದ್ದಾರೆ. ಸಂತೃಪ್ತಿ ವ್ಯವಹಾರ ಮಾಡಿಕೊಂಡು ಹೋಗುತ್ತಿರುವುದು ಡಿಕೆಶಿಗೆ ಸಮಾಧಾನ ಇಲ್ಲ ಅಂತಾ ಕಾಣುತ್ತದೆ. ಗೊಂದಲವೇ ಬೇಕು ಎಂಬುದು ಡಿಕೆಶಿ ಅಪೇಕ್ಷೆ ಇರಬಹುದು. ಆದರೆ ಶಿವಮೊಗ್ಗದ ಜನತೆ ಶಾಂತಿಯಿಂದ ಇರಲು ನಿರ್ಧರಿಸಿದ್ದಾರೆ ಎಂದರು.