– ರಾಜ್ಯಪಾಲರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ – ಕಾಂಗ್ರೆಸ್
– ರಾಜ್ಯಪಾಲರಿಗೆ ಅಗೌರವ ತೋರಿದ ಶಾಸಕರ ವಿರುದ್ಧ ಶಿಸ್ತುಕ್ರಮಕ್ಕೆ ಬಿಜೆಪಿ ಒತ್ತಾಯ
ಬೆಂಗಳೂರು: ಜಂಟಿ ಅಧಿವೇಶದಲ್ಲಿ (Joint Session) ರಾಜ್ಯಪಾಲರು ಮಾಡಿದ ಒಂದು ನಿಮಿಷದ ಭಾಷಣ ವಿಧಾನಸಭೆಯಲ್ಲಿ (Vidhana Sabha) ಸದ್ದು ಮಾಡಿ ಗದ್ದಲ, ಕೋಲಾಹಲ ಸೃಷ್ಟಿಸಿತ್ತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ, ಟೀಕೆ ನಿಂದನೆಗೂ ವೇದಿಕೆ ಒದಗಿಸಿತ್ತು.
ಕಲಾಪ ಆರಂಭವಾದಾಗ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಮಾತಾಡಿ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಆಗಬೇಕು. ನಮ್ಮ 18 ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಅಮಾನತು ಮಾಡಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ? ಈ ಸಂಬಂಧ ಸ್ಪೀಕರ್ ರೂಲಿಂಗ್ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಆದರೆ ಹೆಚ್‌ಕೆ ಪಾಟೀಲ್‌ರು (HK Patil) ರಾಜ್ಯಪಾಲರಿಗೆ ಓಡಿ ಹೋದರು ಅಂದಿದ್ದು ಸರಿಯಲ್ಲ. ರಾಜ್ಯಪಾಲರು ಇದ್ದಾಗ ರಾಷ್ಟ್ರಗೀತೆ ಹಾಡು ಶುರುವಾಗಿದ್ದರೆ ಇರುತ್ತಿದ್ದರು ಎಂದು ಅಶೋಕ್ ಸಮರ್ಥಿಸಿಕೊಂಡರು.
ಶಾಸಕ ಅಶ್ವಥ್ ನಾರಾಯಣ, ಸುನೀಲ್ ಕುಮಾರ್ ಕೂಡಾ ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಮಾತಿನ ಭರದಲ್ಲಿ ಸುನೀಲ್ ಕುಮಾರ್ ಇದು ಗೂಂಡಾ ಸರ್ಕಾರ ಅಂದಿದ್ದು ಕಾಂಗ್ರೆಸ್‌ನವರನ್ನು ಕೆರಳಿಸಿತ್ತು, ಈವೇಳೆ ಸದನದಲ್ಲಿ ಜಟಾಪಟಿ ಮತ್ತಷ್ಟು ಹೆಚ್ಚಾಯಿತು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ
ಇದೇವೇಳೆ ಕಾನೂನು ಸಚಿವ ಹೆಚ್‌ಕೆ ಪಾಟೀಲ್ ಮಾತಾಡಿ ನಿನ್ನೆ ರಾಜ್ಯಪಾಲರ ಕುರಿತು ತಾವು ಮಾತಾಡಿದ್ದನ್ನು ಮತ್ತೆ ಸಮರ್ಥಿಸಿಕೊಂಡರು. ರಾಜ್ಯಪಾಲರು ಭಾಷಣ ಓದದೇ ತಿರಸ್ಕರಿಸಿದರು. ಆಮೂಲಕ ಸಂವಿಧಾನದ 176.1 ನೇ ವಿಧಿ ಉಲ್ಲಂಘಿಸಿದ್ದಾರೆ.ರಾಷ್ಟ್ರಗೀತೆ ಹಾಡೋ ಮುನ್ನವೇ ಸದನದಿಂದ ಓಡಿ ಹೋದ್ರು, ರಾಷ್ಟ್ರಗೀತೆಗೂ ಅಪಮಾನ ಮಾಡಿದ್ರು ಅಂತ ವಾದಿಸಿದರು.ನಾನು ಅವರನ್ನು ನಿನ್ನೆ ತಡೆಯಲಿಲ್ಲ. ಸಿಎಂ ಕರೆದ್ರು ಅಂತ ಹಿಂದೆ ಹೋದೆ ಅಷ್ಟೇ, ನಾನೂ ರಾಜ್ಯಪಾಲರಿಗೆ ಅಡ್ಡಿ ಮಾಡಿದೆ ಅನ್ನೋ ಅಶೋಕ್ ಆರೋಪ ಸರಿಯಲ್ಲ ಅಂತ ಹೆಚ್ಕೆ ಪಾಟೀಲ್ ಸ್ಪಷ್ಟ ಪಡಿಸಿದ್ರು.
ರಾಜ್ಯಪಾಲರು ಸಂವಿಧಾನಕ್ಕೆ, ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಹೀಗಾಗಿ ಅವರು ಕನ್ನಡ ನಾಡಿನ ಜನರ ಹಾಗೂ ಈ ಸದನದ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಹೆಚ್ಕೆ ಪಾಟೀಲ್ ಒತ್ತಾಯಿಸಿದರು.
ಸುರೇಶ್ ಕುಮಾರ್ ಮಾತಾಡುವಾಗ ಮಧ್ಯೆ ಎದ್ದು ಆಕ್ಷೇಪಿಸಿದ ಸಚಿವ ಬೈರತಿ ಸುರೇಶ್‌ಗೆ ಏಳು ತಿಂಗಳಿಗೆ ಹುಟ್ಟಿದವರು ಅಂದಿದ್ದು ಸದನದಲ್ಲಿ ಆಡಳಿತ-ವಿಪಕ್ಷ ನಡುವೆ ಕಿಚ್ಚು ಹಚ್ಚಿತ್ತು. ಕೊನೆಗೆ ಸಿಎಂ ಮಧ್ಯಪ್ರವೇಶ ಮಾಡಬೇಕಾಯ್ತು. ಆ ಪದವನ್ನು ಕಡತದಿಂದ ತೆಗೆಸಲಾಯ್ತು.
ಕೊನೆಗೆ ಮಾತಾಡಿದ ಸ್ಪೀಕರ್ ಖಾದರ್, ರಾಜ್ಯಪಾಲರ ನಡೆ ನಂತರದ ಘಟನೆಗಳ ಬಗ್ಗೆ ಮುಂದಿನ ವಾರ ರೂಲಿಂಗ್ ಕೊಡೋದಾಗಿ ಸದನಕ್ಕೆ ತಿಳಿಸಿದರು.

