ಸುಳ್‌ ಬಿಜೆಪಿ, ಸುಳ್‌ ಸಿಎಂ; ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ – ಜೆಡಿಎಸ್‌ ಕಿಡಿ

Public TV
3 Min Read
BASAVARAJ BOMMAI 10

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ (Kempegowda Jayanti) ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರನ್ನು (H.D.Devegowda) ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸಮರ್ಥನೆಗೆ ಜೆಡಿಎಸ್‌ (JDS) ಕೆಂಡಾಮಂಡಲವಾಗಿದೆ. ʼಸುಳ್‌ ಬಿಜೆಪಿ, ಸುಳ್‌ ಸಿಎಂʼ ಎಂದು ಹ್ಯಾಷ್‌ ಟ್ಯಾಗ್‌ ಹಾಕಿ ಸರಣಿ ಟ್ವೀಟ್‌ ಮೂಲಕ ಜೆಡಿಎಸ್‌ ಕಿಡಿಕಾರಿದೆ.

ಟ್ವೀಟ್‌ನಲ್ಲೇನಿದೆ?
ನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರನ್ನು ಆಹ್ವಾನಿಸದೆ ರಾಜ್ಯ ಸರ್ಕಾರ ಶಿಷ್ಟಾಚಾರ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

ʼಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮʼ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಕೊಳಕು, ವಿಕೃತಿಗಳ ಮಹಾಸಂಗಮವೇ ಬಿಜೆಪಿ. ರಕ್ತಪೀಪಾಸುತನ, ನರಹಂತಕ ಮನಃಸ್ಥಿತಿಯೇ ಬಿಜೆಪಿಯ ನೈಜಮುಖ. ಆಪರೇಷನ್‌ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ.

ಹೆಚ್.ಡಿ.ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ ಅವರ ಅರ್ಧದಿನದ ʼಕರ್ನಾಟಕದ ಕಾಟಾಚಾರದ ಭೇಟಿʼ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ.

ಮಾಜಿ ಪ್ರಧಾನಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಶ್ನೆ ಮಾಡಿದ್ದನ್ನೇ ʼಮಹಾ ಅಪರಾಧʼ ಎಂದು ಚಿತ್ರಿಸುತ್ತಿರುವ ಬಿಜೆಪಿಯ ವಿಕೃತಿ ಆದಿಯಿಂದಲೂ ಧರ್ಮ, ಜಾತಿ ಮತ್ತು ಸುಳ್ಳಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಮಿಥ್ಯೆ ಎನ್ನಲಾದಿತೆ? ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ, ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ.

ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ. ಭೂತದ ಬಾಯಲ್ಲಿ ಭಗದ್ಗೀತೆʼ ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ.

20 ದಿನಗಳ ಹಿಂದೆ ಸಚಿವ ಅವರು ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹದ ಬಗ್ಗೆ ತಿಳಿಸಿ ಆಹ್ವಾನಿಸಿದ್ದರಷ್ಟೇ. ಆದರೆ ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸಿದ್ದರು. ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರನ್ನು ನಮೂದಿಸಲಾಗಿತ್ತೆಂದು ಹಸಿಸುಳ್ಳನ್ನೇ ಬಿಜೆಪಿ ಟ್ವೀಟಿಸಿದೆ.

ಬಿಜೆಪಿ ʼಗೊಬೆಲ್ ಸಂತತಿಯ ಶಿಶುʼ ಎನ್ನುವುದಕ್ಕೆ ಇದಕ್ಕಿಂತ ಸತ್ಯ ಸಾಕ್ಷ್ಯ ಬೇಕಾ? ʼಸುಳ್‌ ಬಿಜೆಪಿʼಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ʼಸುಳ್‌ ಸಿಎಂʼ ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ. ಇದಲ್ಲವೇ ವಿಪರ್ಯಾಸ?

ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಸ್ವತಃ ಫೋನ್‌ ಕರೆ ಮೂಲಕ ದೇವೇಗೌಡರನ್ನು ಆಹ್ವಾನಿಸಿದ್ದಾರೆ ಎಂದು ‘ಗೊಬೆಲ್ ಬಿಜೆಪಿ’ ಟ್ವೀಟಿಸಿ ಸುಳ್ಳು ಹೇಳಿದೆ. ಸತ್ಯ ಏನೆಂಬುದನ್ನು ನಾವೂ ಟ್ವೀಟಿನಲ್ಲೇ ರಾಜ್ಯದ ಜನತೆಗೆ ನಿವೇದಿಸಿದ್ದೇವೆ. ಅದನ್ನು ಓದಲು ʼಗೊಬೆಲ್‌ ಬಿಜೆಪಿʼಗೆ ಗರ ಬಡಿದಿದೆಯಾ?

ನಾಡಪ್ರಭುಗಳ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅರ್ಧದಿನದ ಅರೆಬರೆ ಭೇಟಿಯಲ್ಲಿ ಘನವೇತ್ತ ಪ್ರಧಾನಿಗಳು ಮಾಡಿದ್ದಾದರೂ ಏನು? ‘ಒಂದೇ ಕಲ್ಲಿನಲ್ಲಿ ನಾಲ್ಕು ಜಾತಿಗಳ ಮತಬುಟ್ಟಿಗೆ ಕೈ ಹಾಕಿದ ಪ್ರಧಾನಿ’ / ‘ಪ್ರತಿಮಾ ಪಥ, ಮೋದಿ ರಥ’ ಎನ್ನುವ ಸುದ್ದಿಗಳನ್ನು ನೋಡಲಿಲ್ಲವೆ? ಇದನ್ನೂ ಓದಿ: 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲುವು ಖಚಿತ – ನಜೀರ್ ಅಹಮದ್

ಕಮಲಕ್ಕೆ ಕಾಮಾಲೆ ಕಣ್ಣು ಎನ್ನುವುದು ನಾಟಕವೋ, ಬೂಟಕವೋ? ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?

ಕೊನೆಯದಾಗಿ; ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ಬಿಜೆಪಿ ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ ಎಂದು ಬಿಜೆಪಿ ವಿರುದ್ಧ ಜೆಡಿಎಸ್‌ ಹರಿಹಾಯ್ದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *