ಗದಗ: ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ಮೂಲಕ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿದೆ. ಅಕ್ರಮ ಕಟ್ಟಡ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಶಿಂಗಟಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೆ ಬಜಾರ್ ಹಾಗೂ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಅಕ್ರಮವಾಗಿ ಮನೆ, ಅಂಗಡಿಗಳನ್ನು ನಿರ್ಮಿಸಲಾಗಿತ್ತು. ನಕ್ಷೆಯ ಪ್ರಕಾರ 30 ಅಡಿ ರಸ್ತೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಸರಿಯಾದ ರಸ್ತೆ ಇಲ್ಲದ ಕಾರಣ, ಆ ಅಕ್ರಮ ಕಟ್ಟಡಗಳ ತೆರವಿಗೆ ಗ್ರಾಮ ಪಂಚಾಯತ್, ತಹಶಿಲ್ದಾರ್, ತಾಲೂಕು ಪಂಚಾಯತ್, ಜಿಲ್ಲಾಡಳಿತಕ್ಕೆ ದಲಿತ ಕಾಲೋನಿ ಜನರಿಂದ ಮನವಿ ಸಲ್ಲಿಸಲಾಗಿತ್ತು. ಎಲ್ಲವನ್ನೂ ಪರಿಶೀಲಿಸಿ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ತೆರವು ಬಗ್ಗೆ ನೋಟೀಸ್ ನೀಡಲಾಯಿತು. ಆದರೂ ತೆರವುಗೊಳ್ಳದ ಹಿನ್ನೆಲೆ, ಇಂದು ಮುಂಡರಗಿ ತಹಶಿಲ್ದಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದರು. ಇದನ್ನೂ ಓದಿ: ಸರ್ವರ್ ಸಮಸ್ಯೆಯಿಂದ ಅಕ್ಕಿ ಪಡೆಯಲು ಪರದಾಟ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಸಂತೆ ಬಜಾರ, ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ 30 ಅಡಿ ಅಗಲ ವಿಸ್ತೀರ್ಣದ ಅಕ್ಕ ಪಕ್ಕದ ಮನೆ, ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಇದಕ್ಕೆ ಕಟ್ಟಡ ಮಾಲಿಕರು, ಕೆಲ ಸ್ಥಳಿಯರು ವಿರೋಧ ವ್ಯಕ್ತಪಡಿಸಿದರು. ವಸ್ತುಗಳ ಸ್ಥಳಾಂತರಕ್ಕೆ ಇನ್ನು ಕೆಲವು ದಿನ ಕಾಲಾವಕಾಶ ಕೊಡಿ ಎಂದು ಕೇಳಿದರು. ಇನ್ನು ಕೆಲವರು ತೆರವುಗೊಳಿಸುವುದಾದರೆ ಗ್ರಾಮದ ಎಲ್ಲಾ ರಸ್ತೆಗಳ ತೆರವು ಕಾರ್ಯ ನಡೆಯಲಿ ಅಂತ ಪಟ್ಟು ಹಿಡಿದರು. ಇದನ್ನೂ ಓದಿ: ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ: ಆರ್ ಅಶೋಕ್
ಕೆಲಕಾಲ ಮಾತಿನ ಚಕಮಕಿ ನಡೆಯಿತು. ಒಟ್ಟಿನಲ್ಲಿ ವಾದ-ವಿವಾದಗಳ ನಡುವೆ ತೆರವು ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ, ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳು, ಪೊಲೀಸರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್