-ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದ ಭರ್ಜರಿ ವೈಮಾನಿಕ ಪ್ರದರ್ಶನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ದಸರಾದ 9ನೇ ದಿನವಾದ ಇಂದೂ ಕೂಡ ನಗರದಾದ್ಯಂತ ಹತ್ತು ಹಲವು ಕಾರ್ಯಕ್ರಮಗಳು ಗಮನಸೆಳೆದಿವೆ. ದಸರೆಯ ಮುಖ್ಯ ಆಕರ್ಷಣೆಯಾದ ಜಂಬುಸವಾರಿಗೆ ದಿನಗಣನೆ ಶುರುವಾಗಿದ್ದು, ಅರಮನೆ ಆವರಣದಲ್ಲಿ ಜಂಬೂಸವಾರಿಯ ರಿಹರ್ಸಲ್ ನಡೆದಿದೆ. ಮತ್ತೊಂದೆಡೆ ಕಂಬಳ ಹಾಗೂ ಏರ್ ಶೋ (Air Show) ಕೂಡಾ ಪ್ರವಾಸಿಗರ ಮೈನವಿರೇಳಿಸಿದ್ದು, ಮೈಸೂರು ಜಗಮಗಿಸುತ್ತಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 9ನೇ ದಿನವಾದ ಇಂದೂ ಕೂಡಾ ಹತ್ತು ಹಲವು ಕಾರ್ಯಕ್ರಮಗಳು ಮೇಳೈಸಿವೆ. ಜಂಬೂಸವಾರಿಗೆ ದಿನ ಹತ್ತಿರವಾಗಿದ್ದು, ಇಂದು ಅರಮನೆ ಆವರಣದಲ್ಲಿ ಫೈನಲ್ ರಿಹರ್ಸಲ್ ಜರುಗಿದೆ. ಗಜಪಡೆ, ಅಶ್ವರೋಹಿ ದಳ ಹಾಗೂ ಕಲಾತಂಡಗಳೊಂದಿಗೆ ಪೊಲೀಸ್ ಬ್ಯಾಂಡ್ ಸದ್ದಿನ ಜೊತೆ ಪ್ರಶಾಂತ ಆನೆಗೆ ಅರಣ್ಯಾಧಿಕಾರಿಗಳು ಪುಷ್ಪಾರ್ಚನೆ ಮಾಡಿ ಅಂತಿಮ ಹಂತದ ತಾಲೀಮು ನಡೆಸಿದ್ದಾರೆ. ಇದನ್ನೂ ಓದಿ: 90 ದಿನಗಳ ಮುಂಚೆಯೇ ಪಾಸ್ಗೆ ಅರ್ಜಿ ಸಲ್ಲಿಸಿ – ಅಯೋಧ್ಯೆ ಬಾಲ ರಾಮನ ದರ್ಶನಕ್ಕೆ ಹೊಸ ರೂಲ್ಸ್!
ಇನ್ನೂ ದಸರಾದಲ್ಲಿ ಕರಾವಳಿ ಕಂಬಳದ ಸಂಭ್ರಮ ಜೋರಾಗಿದ್ದು, ಇಂದು ಎರಡನೇ ದಿನವೂ ಪಾರಂಪರಿಕ ಕಂಬಳ ಸ್ಪರ್ಧೆ ಮುಂದುವರಿದಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡಲಗೆ ಹಾಗೂ ಕಡೆಹಲಗೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ ಕೋಣಗಳ ಸ್ಪರ್ಧೆ ನಡೆಯುತ್ತಿದ್ದು, ರಾತ್ರಿಯಿಡೀ ರೋಚಕವಾಗಿ ಸಾಗಿದ ಕೋಣಗಳ ಓಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿಗರು ಹರಿದುಬಂದಿದ್ದಾರೆ. ಇಂದು ರಾತ್ರಿ 7ರವರೆಗೂ ಕೋಣಗಳ ಈ ಸ್ಪರ್ಧೆ ಮುಂದುವರಿಯಲಿದ್ದು, ಸಂಜೆ ಅಂತಿಮ ಪಂದ್ಯದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಅಲ್ಲದೇ ಮೈಸೂರಿನ ಬನ್ನಿಮಂಟಪ ಕ್ರೀಡಾಂಗಣದಲ್ಲಿ ನಿನ್ನೆ ಹವಾಮಾನ ವೈಪರೀತ್ಯದಿಂದ ಕೇವಲ 10 ನಿಮಿಷಕ್ಕೆ ಮೊಟಕುಗೊಂಡಿದ್ದ ಏರ್ ಶೋ, ಇಂದು ಯಶಸ್ವಿಯಾಗಿ ಜರುಗಿದೆ. ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದ ಭರ್ಜರಿ ವೈಮಾನಿಕ ಪ್ರದರ್ಶನ ನಡೆದಿದ್ದು, ಆಕಾಶದಲ್ಲಿ ಒಟ್ಟು 9 ಜೆಟ್ ವಿಮಾನಗಳ ಮೂಲಕ 20 ನಿಮಿಷಗಳ ಕಾಲ ಲೋಹದ ಹಕ್ಕಿಗಳು ಕಸರತ್ತು ನಡೆಸಿ, ಬಾನಂಗಳದಲ್ಲಿ ವರ್ಣರಂಜಿತ ಕಲೆಗಳನ್ನು ಬಿಡಿಸಿದ್ರು. ಸಾವಿರಾರು ಸಂಖ್ಯೆಯ ಜನಸಾಗರ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಂಡಿದ್ದಾರೆ.ಇದನ್ನೂ ಓದಿ:Ti ger Shroff Firing |50 ಸಾವಿರ ಅಡ್ವಾನ್ಸ್ ಪಡೆದು ಶೂಟ್ – ಟೈಗರ್ ಫೈರಿಂಗ್ ಟೈಮ್ ಲೈನ್
ಮತ್ತೊಂದೆಡೆ, ನಾಡಹಬ್ಬ ದಸರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾವುತರು ಹಾಗೂ ಕಾವಾಡಿಗರ ಕುಟುಂಬಗಳಿಗೆ ವಿಶೇಷ ಉಪಹಾರ ಕೂಟ ಆಯೋಜಿಸಿದ್ರು. ಅರಮನೆ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಚಿವೆ ಶೋಭಾ ಕರಂದ್ಲಾಜೆ ತಾವೇ ಸ್ವತಃ ಮಾವುತರಿಗೆ ಹೋಳಿಗೆ ಹಾಗೂ ಉಪಹಾರವನ್ನು ಬಡಿಸಿದರು. ಉಪಹಾರಕ್ಕೂ ಮುನ್ನ ದಸರಾ ಆನೆಗಳಿಗೆ ಕಬ್ಬು ಮತ್ತು ಹಣ್ಣುಗಳನ್ನು ತಿನ್ನಿಸಿ, ಆನೆಗಳ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.
ಒಟ್ಟಿನಲ್ಲಿ, ಜಂಬೂಸವಾರಿ ದಿನ ಹತ್ತಿರವಾಗ್ತಿದ್ದು, ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ.ಇದನ್ನೂ ಓದಿ: 4 ವರ್ಷಗಳಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ ಸೇರಿ 8 ಸೆಲೆಬ್ರಿಟಿಗಳ ಮೇಲೆ ಶೂಟೌಟ್!
