-ಆನಂದ್ ಸಿ.ಮಾಮನಿ ಹೊಸ ಡೆಪ್ಯೂಟಿ ಸ್ಪೀಕರ್?
ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಜೆ.ಕೆ. ಕೃಷ್ಣಾರೆಡ್ಡಿ, ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಇವತ್ತು ಸದನದಲ್ಲಿ ಬಿಜೆಪಿಯು ಕೃಷ್ಣಾರೆಡ್ಡಿ ವಿರುದ್ಧ ನಿಯಮ 169ರಡಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾವ ಮಂಡಿಸಲಿತ್ತು. ಆದರೆ ಮುಜುಗರದಿಂದ ಪಾರಾಗಲು ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನವೇ ಕೃಷ್ಣಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆ ಮೂಲಕ ಡೆಪ್ಯೂಟಿ ಸ್ಪೀಕರ್ ಸ್ಥಾನದ ಮೇಲೆ ಕಣ್ಣೀಟ್ಟಿರುವ ಸವದತ್ತಿಯ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಅವರ ಹಾದಿ ಸುಗಮವಾದಂತಾಗಿದೆ. ಸದ್ಯದಲ್ಲೇ ಉಪಸಭಾಧ್ಯಕ್ಷರಾಗಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಯ್ಕೆ ಆಗಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಿತು. ಬಜೆಟ್ ಅಧಿವೇಶನದ ಮೊದಲ ದಿನವೇ ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿಯ 25 ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಕಾಗೇರಿ ಅವರಿಗೆ ಅವಿಶ್ವಾಸ ನಿರ್ಣಯ ನೊಟೀಸ್ ನೀಡಿದ್ದರು. ಬಿಜೆಪಿಯುಂದ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸವದತ್ತಿ ಆನಂದ್ ಸಿ. ಮಾಮನಿ ಪ್ರಬಲ ಬೇಡಿಕೆ ಇಟ್ಟಿದ್ದು, ಬಹುತೇಕ ಬಿಜೆಪಿ ಶಾಸಕರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಹೊಸ ಡೆಪ್ಯೂಟಿ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆ ನಿಶ್ಚಿತ ಎನ್ನಲಾಗಿದೆ.