ತುಮಕೂರು: ಮಾಧುಸ್ವಾಮಿ ಬಂಡಾಯದ ಮೂಲಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ತುಮಕೂರಿನಲ್ಲಿ ಇದೀಗ ಎಲ್ಲಾ ವೈಷಮ್ಯಗಳು ತೆರೆಮರೆಗೆ ಸೇರಿದಂತೆ ಕಾಣುತ್ತಿದೆ. ವಿ.ಸೋಮಣ್ಣ ಮೇಲಿನ ಮಾಧುಸ್ವಾಮಿ (J.C.Madhuswamy) ಮುನಿಸು ತಣ್ಣಗಾಗಿದೆ. ಇತ್ತ ವಿ.ಸೋಮಣ್ಣರ ಪರ ಮಾಧುಸ್ವಾಮಿ ಪ್ರಚಾರ ಮಾಡುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರೆ ಎಳೆಯಲಾಗಿದೆ.
ತುಮಕೂರು (Tumakuru) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಮಾಧುಸ್ವಾಮಿಯ ಕೋಪ ಕಡಿಮೆಯಾದಂತೆ ಕಾಣುತ್ತಿದೆ. ಸೋಮಣ್ಣರ ಪರ ಬಹಿರಂಗ ಪ್ರಚಾರ ಮಾಡದೇ ಇದ್ದರೂ ಅಂಡರ್ ಗ್ರೌಂಡ್ ವರ್ಕ್ ಮಾಡುತ್ತಿದ್ದಾರೆ. ಮಾಧುಸ್ವಾಮಿಯ ಕೋಪ ತಣಿಯಲು ರಾಜ್ಯ ಬಿಜೆಪಿ ವರಿಷ್ಠರು ಹೊಸದೊಂದು ಮದ್ದು ಅರೆದಂತೆ ಕಾಣುತ್ತಿದೆ. ಇದನ್ನೂ ಓದಿ: ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!
ವಿ.ಸೋಮಣ್ಣರ ಪರ ಕೆಲಸ ಮಾಡುವ ಜೊತೆಗೆ ಮಾಧುಸ್ವಾಮಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರಿನಿಂದ ಶ್ರೀನಿವಾಸ್ ಪೂಜಾರಿ ಗೆಲ್ಲಿಸಿಕೊಂಡು ಬಂದರೆ ಮಾಧುಸ್ವಾಮಿ ಲಕ್ ಬದಲಾಗಬಹುದು ಎನ್ನಲಾಗಿದೆ. ಕಾರಣ, ಶ್ರೀನಿವಾಸ್ ಪೂಜಾರಿಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಮಾಧುಸ್ವಾಮಿ ಕೂರಿಸುವ ನಿರ್ಧಾರ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಪರಿಷತ್ ವಿಪಕ್ಷ ನಾಯಕ ಪಟ್ಟ ಕಟ್ಟುವ ಭರವಸೆ ಬಳಿಕವೇ ಮಾಧುಸ್ವಾಮಿ ಸೋಮಣ್ಣರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಭರವಸೆ ಬಳಿಕವೇ ಮಾಧುಸ್ವಾಮಿ ಇನ್ನಷ್ಟು ಆಕ್ಟಿವ್ ಆಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸೋಮಣ್ಣ ಪರ ಕೆಲಸ ಮಾಡುವಂತೆ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತೃಪ್ತಗೊಂಡ ಜೆಡಿಎಸ್ ಮುಖಂಡರನ್ನೂ ಭೇಟಿಯಾಗಿ ಅಸಮಾಧಾನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಪ್ರಚಾರದಲ್ಲಿದ್ದಾರೆ. ರಾಜ್ಯ ಬಿಜೆಪಿ ವರಿಷ್ಠರು ಕೊಟ್ಟ ಟಾಸ್ಕ್ ಯಶಸ್ವಿಗೊಳಿಸಿ, ಪರಿಷತ್ ವಿಪಕ್ಷ ನಾಯಕನ ಪಟ್ಟಕ್ಕೇರುವ ಪ್ರಯತ್ನದಲ್ಲಿ ಇದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ತೊರೆದ 400 ಕಾರ್ಯಕರ್ತರು