ವಾಷಿಂಗ್ಟನ್: ದೂರವಾಣಿ ಸಂಭಾಷಣೆ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ
ಲೆಬನಾನ್‌ನ ಬೈರೂತ್ ಮೇಲೆ ಇಸ್ರೇಲ್ (Isreal) ನಡೆಸುತ್ತಿರುವ ಸರಣಿ ಬಾಂಬ್ ದಾಳಿಗಳ ಬಗ್ಗೆ ಟ್ರಂಪ್ ತೀವ್ರವಾಗಿ ಕಿಡಿಕಾರಿದ್ದಾರೆ. ನಿನಗೆ ಹುಚ್ಚು ಹಿಡಿದಿದ್ಯಾ? ನೀನು ಏನು ಮಾಡುತ್ತಿದ್ದೀಯಾ?” ಎಂದು ಟ್ರಂಪ್ ನೆತನ್ಯಾಹು ವಿರುದ್ಧ ಏಕವಚನದಲ್ಲೇ ಕೂಗಾಡಿದ್ದಾರೆ.
ಟ್ರಂಪ್ ಮತ್ತು ನೆತನ್ಯಾಹು ನಡುವೆ ನಡೆದ 40 ರಿಂದ 60 ನಿಮಿಷಗಳ ಸುದೀರ್ಘ ದೂರವಾಣಿ ಕರೆ ಅತ್ಯಂತ ಆಕ್ರೋಶಭರಿತವಾಗಿತ್ತು. ಈ ಕರೆಯಲ್ಲಿ ನೆತನ್ಯಾಹು ಅವರು ಅಮೆರಿಕದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನೆತನ್ಯಾಹು ಅವರ ರಾಜಕೀಯ ಮತ್ತು ಕಾನೂನು ಸಂಕಷ್ಟಗಳ (ಭ್ರಷ್ಟಾಚಾರದ ಪ್ರಕರಣ) ಸಮಯದಲ್ಲಿ ತಾನು ನೀಡಿದ ಬೆಂಬಲವನ್ನು ನೆನಪಿಸಿದ ಟ್ರಂಪ್, “ನಾನಿಲ್ಲದಿದ್ದರೆ ನೀನು ಈ ಹೊತ್ತಿಗೆ ಜೈಲಿನಲ್ಲಿರುತ್ತಿದ್ದೆ, ನಾನು ನಿನ್ನನ್ನು ಉಳಿಸುತ್ತಿದ್ದೇನೆ. ಆದರೆ ಇಸ್ರೇಲ್‌ನ ಈ ಕ್ರಮಗಳಿಂದಾಗಿ ಇಡೀ ಜಗತ್ತು ಈಗ ನಿಮ್ಮನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ʻಅಬ್ರಹಾಂ ಅಸ್ತ್ರʼ ಪ್ರಯೋಗ – ಟ್ರಂಪ್ ಕೆಂಗಣ್ಣಿಗೆ ಗುರಿಯಾಗುತ್ತಾ ಪಾಕಿಸ್ತಾನ?

ಇರಾನ್‌ನೊಂದಿಗೆ ಹೊಸ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಾವು ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸುತ್ತಿದ್ದೇವೆ. ಇಸ್ರೇಲ್ ಮಾಡುತ್ತಿರುವ ದಾಳಿಗಳು ಈ ಮಾತುಕತೆಯನ್ನು ಸಂಪೂರ್ಣವಾಗಿ ಹಳಿತಪ್ಪಿಸುತ್ತಿವೆ ಮತ್ತು ಇರಾನ್ ಮಾತುಕತೆಯಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ MQ-1 ಡ್ರೋನ್ ಹೊಡೆದುರುಳಿಸಿದ್ದೇವೆ – ಬೆನ್ನುತಟ್ಟಿಕೊಂಡ ಇರಾನ್
ಇರಾನ್ ಮೇಲಿನ ಮಿಲಿಟರಿ ಒತ್ತಡವನ್ನು ಕಡಿಮೆ ಮಾಡುವುದು ದೊಡ್ಡ ತಪ್ಪು ಮತ್ತು ಇರಾನ್ ಕೇವಲ ಸಮಯ ವ್ಯರ್ಥ ಮಾಡುತ್ತಿದೆ ಎಂದು ನೆತನ್ಯಾಹು ವಾದಿಸಿದ್ದಾರೆ. ಅಮೆರಿಕದ ಈ ಶಾಂತಿ ಪ್ರಸ್ತಾಪದಿಂದ ನೆತನ್ಯಾಹು ತೀವ್ರ ಆತಂಕಕ್ಕೆ ಒಳಗಾಗಿದ್ದು, ಕರೆಯ ನಂತರ ಅವರು ತೀವ್ರ ತಲ್ಲಣಗೊಂಡಿದ್ದಾರೆ ಎಂದು ವರದಿಯಾಗಿದೆ.
