ಕಾರವಾರ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಕೊರತೆ ಹಾಗೂ ಬೆಲೆ ಏರಿಕೆಯ ಭೀತಿಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ತೈಲ ಬೆಲೆ ಬ್ಯಾರಲ್‌ಗೆ ಏರಿಕೆ ಕಂಡಿದೆ. ಇದರ ಮಧ್ಯೆ ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಕಣಿವೆಯ ಸಮುದ್ರ ಮಾರ್ಗ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿರುವುದಾಗಿ ತಿಳಿದುಬಂದಿದೆ. ಇನ್ನೂ ಕೆಲವು ತಪ್ಪು ಮಾಹಿತಿಗಳು ಭಟ್ಕಳದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದರ ಪರಿಣಾಮ ಭಟ್ಕಳದಲ್ಲಿ ಪೆಟ್ರೋಲ್ ಕೃತಕ ಅಭಾವ ಸೃಷ್ಟಿಯಾಗಿದೆ.
ಇರುವ ಐದು ಪೆಟ್ರೋಲ್ ಬಂಕ್‌ಗಳಲ್ಲಿ ಜನ ಬೆಳಗಿನಿಂದ ಮುಗಿಬಿದ್ದಿದ್ದಾರೆ. ಇದರಿಂದಾಗಿ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಇನ್ನು ಎಲ್ಲಿ ದರ ದುಪ್ಪಟ್ಟಾಗಬಹುದು ಎಂಬ ಭಯದಲ್ಲಿ ಭಟ್ಕಳದಲ್ಲಿ ಜನ ಪೆಟ್ರೋಲ್ ಬಂಕ್‌ಗೆ ಕ್ಯಾನ್‌ಗಳನ್ನು ಹಿಡಿದು ತಮ್ಮ ವಾಹನಕ್ಕೆ ಹಾಕಿಸಿಕೊಂಡಿರುವುದಲ್ಲದೇ ಹೆಚ್ಚುವರಿಯಾಗಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಇನ್ನೂ ಹಲವರಿಗೆ ಪೆಟ್ರೋಲ್ ಸಿಗದೇ ಕುಂದಾಪುರ ತಾಲೂಕು ಭಾಗ ಹಾಗೂ ಹೊನ್ನಾವರಕ್ಕೆ ತೆರಳಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸಿದ ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಕೈಗೊಂಡ ಕ್ರಮಗಳ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಅಂತರರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಪರ್ಶಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಕಣಿವೆಯ ಸಮುದ್ರ ಮಾರ್ಗ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿರುವುದಾಗಿ ತಿಳಿದುಬಂದಿದೆ. ಜಗತ್ತಿನ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಣೆ ಇದೇ ಕಿರಿದಾದ ಸಮುದ್ರ ಮಾರ್ಗದ ಮೂಲಕ ಸಾಗುವುದರಿಂದ ಇಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಇಂಧನ ಮಾರುಕಟ್ಟೆಗೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬೆಳವಣಿಗೆಯ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 85 ಡಾಲರ್ ಮೀರಿದ್ದು, ಇದು ಸತತ ಮೂರನೇ ದಿನದ ಏರಿಕೆಯಾಗಿರುವುದಾಗಿ ವರದಿಯಾಗಿದೆ.
ಇಂಧನ ತಜ್ಞರ ಪ್ರಕಾರ, ಆತಂಕದಿಂದ ಜನರು ಹೆಚ್ಚಾಗಿ ಪೆಟ್ರೋಲ್ ಖರೀದಿಸುವುದು ಅಥವಾ ಸಂಗ್ರಹಿಸುವುದು ಸ್ಥಳೀಯ ಮಟ್ಟದಲ್ಲಿ ಕೃತಕ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಇಂಧನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲದಿದ್ದರೂ ಮಧ್ಯಪ್ರಾಚ್ಯದ ಬೆಳವಣಿಗೆಗಳು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ. ಸದ್ಯ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನ ಸರಬರಾಜಿನ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಹೀಗಿದ್ದರೂ ಭಟ್ಕಳದಲ್ಲಿ ಮಾತ್ರ ತಮಗೆ ಪೆಟ್ರೋಲ್ ಮುಂದೆ ಸಿಗುವುದಿಲ್ಲವೋ ಎಂಬಂತೆ ಜನ ಮುಗಿ ಬೀಳುತಿದ್ದಾರೆ.

