ಬೆಂಗಳೂರು: ದೆಹಲಿಯಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸುತ್ತಿರುವ ಮಾಜಿ ಸಂಸದೆ ರಮ್ಯಾ ರಾಜ್ಯ ನಾಯಕರ ಮೇಲೆ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಸದಸ್ಯರ ಮಹತ್ವದ ಸಭೆ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜನೆಗೊಂಡಿತ್ತು. ಈ ಸಭೆಯಲ್ಲಿ ತಾರಾ ಪ್ರಚಾರಕರ ಜೊತೆ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಹಾಜರಾಗಿದ್ದರು.
Advertisement
ಮಾಲಾಶ್ರೀ, ಅಭಿನಯ, ಸಾಧು ಕೋಕಿಲ ಪಕ್ಕ ರಮ್ಯಾ ಅವರಿಗೆ ಸೀಟ್ ವ್ಯವಸ್ಥೆ ಮಾಡಲಾಗಿತ್ತು. ಇವರಿಗೆಲ್ಲ ಪ್ರಾರಂಭದ ಐದನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಮ್ಯಾ ಅವರು ಈ ಸಾಲಿನಲ್ಲಿ ಕುಳಿತುಕೊಳ್ಳದೇ ಕೊನೆಯ ಮೂರನೇ ಸಾಲಿನಲ್ಲಿ ಕುಳಿತುಕೊಂಡಿದ್ದರು.
Advertisement
Advertisement
ಸಭೆ ಆರಂಭಗೊಂಡ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ರಮ್ಯಾ ಅವರು ದೆಹಲಿಗೆ ಮಾತ್ರ ಸೀಮಿತವಲ್ಲ. ನೀವು ರಾಜ್ಯದವರಾದ ಕಾರಣ ರಾಜ್ಯದಲ್ಲಿ ಹೆಚ್ಚು ತೊಡಗಿಸಿಕೊಂಡು ಹೆಚ್ಚು ಪ್ರಚಾರ ನಡೆಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದರು.
Advertisement
ದೆಹಲಿಯಲ್ಲಿ ಮಾತ್ರ ರಾಜಕೀಯ ಮಾಡುವುದಲ್ಲ. ಕರ್ನಾಟಕದಲ್ಲೂ ರಾಜಕೀಯ ಮಾಡಿ. ದೆಹಲಿಗೆ ಮಾತ್ರ ಸೀಮಿತವಾಗಬೇಡಿ. ಕರ್ನಾಟಕದ ಕಡೆಯೂ ಗಮನ ಹರಿಸಿ ಎಂದು ರಮ್ಯಾ ಅವರಿಗೆ ಡಿಕೆಶಿ ಸಲಹೆ ನೀಡಿದರು ಎಂಬುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಈ ಸಭೆಯಲ್ಲಿ ರಮ್ಯಾ ಅವರನ್ನು ವೇದಿಕೆಗೆ ಬರುವಂತೆ ಕರೆಯಲಾಯಿತು. ಆದರೆ ವೇದಿಕೆಗೆ ಹೋಗಲೇ ಇಲ್ಲ. ಮೂರು ಬಾರಿ ಕರೆದ ಬಳಿಕ ರಮ್ಯಾ ವೇದಿಕೆಗೆ ತೆರಳಿದರು.
ರಮ್ಯಾ ಆರಂಭದಲ್ಲಿ ಕರೆದಾಗ ಬಾರದೆ ನಂತರ ವೇದಿಕೆಗೆ ಏರಿದ್ದನ್ನು ನೋಡಿ ಡಿಕೆಶಿ, ಆರಂಭದಲ್ಲಿ ವೇದಿಕೆಗೆ ಕರೆದಾಗ ನೀವು ಬರಲಿಲ್ಲ. ಹಿಂಜರಿದು ಆಮೇಲೆ ವೇದಿಕೆ ಏರಿದ್ದೀರಿ. ಆದರೆ ಪಕ್ಷ ಕಟ್ಟುವ ಕೆಲಸದಲ್ಲಿ ಈ ರೀತಿಯ ಹಿಂಜರಿತ ಬೇಡ. ಹೀಗಾದರೆ ಪಕ್ಷ ಮತ್ತು ಚುನಾವಣೆಯ ಕೆಲಸಗಳು ನಡೆಯುವುದಿಲ್ಲ. ಬದ್ಧತೆಯಿಂದ ಯಾವುದೇ ಹಿಂಜರಿಕೆಯಿಲ್ಲದೇ ಪಕ್ಷದ ಕೆಲಸಗಳಲ್ಲಿ ತೊಡಗಿ ಎಂದು ಸಲಹೆ ನೀಡಿದರು. ಇದಾದ ಬಳಿಕ ರಮ್ಯಾ ಸಭೆಯಿಂದ ಅರ್ಧಕ್ಕೆ ಎದ್ದು ಹೋದರು. ದೆಹಲಿಗೆ ತೆರಳಬೇಕೆಂದು ಹೇಳಿ ಸಭೆಯಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ.
ರಮ್ಯಾ ಅವರು ಇಂದು ದಿನವಿಡಿ ಸಭೆಯಲ್ಲಿ ಭಾಗವಹಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬಲ ಪಡಿಸುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೈ ನಾಯಕರ ಮೇಲೆ ಮುನಿಸಿಕೊಂಡು ರಮ್ಯಾ ಅರ್ಧಕ್ಕೆ ನಿರ್ಗಮಿಸಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ. ಇದನ್ನೂ ಓದಿ: `ಕೈ’ ಸಭೆಯಲ್ಲಿ ಪ್ರತಾಪ್ ಸಿಂಹ, ಹೆಗ್ಡೆ ಭಾಷಣಕ್ಕೆ ಸಿಎಂ ಮೆಚ್ಚುಗೆ!