– ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಸ್ಟ್ ಟೈಂ ಭಾರತ ಸೋಲಿಸಿದ ಐರ್ಲೆಂಡ್
ಬೆಲ್‌ಫಾಸ್ಟ್: ಓವರ್ ಕಾನ್ಫಿಡೆನ್ಸ್‌ನಿಂದ ಮುಂದುವರಿದರೆ ಏನಾಗುತ್ತದೆ ಎಂಬುದಕ್ಕೆ ಭಾರತ ತಂಡದ (Team India) ಪ್ರದರ್ಶನ ಮತ್ತೆ ಸಾಕ್ಷಿಯಾಗಿದೆ. 2024 ರಲ್ಲಿ ಭಾರತ ಟಿ20 ಚಾಂಪಿಯನ್ ಆದ ಬಳಿಕ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿತ್ತು. ಇದೀಗ ಚುಟುಕು ಕ್ರಿಕೆಟ್‌ನ ವಿಶ್ವಚಾಂಪಿಯನ್ ತಂಡವಾಗಿರುವ ಭಾರತವನ್ನು 34 ರನ್ ಗಳಿಂದ ಸೋಲಿಸಿದ ಐರ್ಲೆಂಡ್ ತಂಡ (Ireland Team) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದೆ.
ಈ ಮೂಲಕ 2 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಕಾಯ್ದುಕೊಂಡಿದೆ. ಮುಂದಿನ ಪಂದ್ಯ ಜೂನ್ 28ರ ಭಾನುವಾರದಂದು ನಡೆಯಲಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೂ ಸರಣಿ ಡ್ರಾ ಆಗಲಿದ್ದು, 2023ರ ಡಿಸೆಂಬರ್ ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ಟಿ20 ಸರಣಿ ಕೈವಶ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.

ಬೆಲ್ ಫಾಸ್ಟ್ ನಲ್ಲಿ ಜೂನ್ 26ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 18.5 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಅಬ್ಬರಿಸಿ, ಕುಸಿದ ಭಾರತ
ಸವಾಲಿನ ಗುರಿ ಪಡೆದ ಭಾರತ ತಂಡ 2ನೇ ಓವರ್ ನಲ್ಲಿ ಸಂಜು ಸ್ಯಾಮ್ಸನ್ (5 ರನ್) ಮತ್ತು ಇಶಾನ್ ಕಿಶನ್ (1 ರನ್) ಮತ್ತು ನಾಯಕ ಶ್ರೇಯಸ್ ಅಯ್ಯರ್ (3 ರನ್) ಅವರ ವಿಕೆಟ್ ಅನ್ನು 60 ರನ್ ನೊಳಗೆ ಕಳೆದುಕೊಂಡಿತು. ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೂ ಬಿರುಸಿನ ಆಟವಾಡಿದ ಅಭಿಷೇಕ್ ಶರ್ಮಾ (Abhishek Sharma) (20 ಎಸೆತದಲ್ಲಿ 49 ರನ್) ಕೇವಲ 1 ರನ್ ನಿಂದ ಅರ್ಧಶತಕದಿಂದ ವಂಚಿತರಾದರು.

ಅಭಿಷೇಕ್ ವಿಕೆಟ್ ಪತನದ ಬಳಿಕ ಶಿವಂ ದುಬೆ (25 ರನ್) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಐರ್ಲೆಂಡ್ ಬೌಲಿಂಗ್ ದಾಳಿಗೆ ರನ್ ಕದಿಯಲು ತಿಣುಕಾಡಿದರು. ಕೊನೆಗೆ 148 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲಿಗೆ ತುತ್ತಾಯಿತು.
ಐರ್ಲೆಂಡ್ ಪರ ಮ್ಯಾಟ್ ಹೊಲ್ಲಾರ್ಡ್ ಮತ್ತು ಮ್ಯಾಥ್ಯೂ ಹಂಪ್ರೆಯ್ಸ್ ಅವರು ತಲಾ 3 ವಿಕೆಟ್ ಪಡೆದರು. ಭಾರತ ಮೂಲದ ಜೈ ಮುಂದ್ರಾ ಅವರು ಪದಾರ್ಪಣೆ ಪಂದ್ಯದಲ್ಲೇ 2 ವಿಕೆಟ್ ಪಡೆದು ಮಿಂಚಿದರು. 3 ವಿಕೆಟ್ ಪಡೆದ ಹೊಲ್ಲಾರ್ಡ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡ ನಾಯಕ ಲಾರ್ಸನ್ ಟಕ್ಕರ್ (36 ಎಸೆತದಲ್ಲಿ 50 ರನ್) ಮತ್ತು ಗರೆಥ್ ಡೆಲಾನಿ (32 ಎಸೆತದಲ್ಲಿ 49 ರನ್) ಅವರ ಸ್ಫೋಟಕ ಬ್ಯಾಟಿಂಗ್ ನ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರು 4 ಓವರ್ ಗಳಲ್ಲಿ 57 ರನ್ ನೀಡಿ ದುಬಾರಿ ಎನಿಸಿಕೊಂಡರು.
ಹರ್ಷಿತ್ ರಾಣಾ 3 ವಿಕೆಟ್, ಅರ್ಷ್‌ದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.
