ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನ (IPL 2025) ಲೀಗ್ ಸುತ್ತಿನ ಪಂದ್ಯಗಳು ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಸೂಪರ್ ಸಂಡೇ ಗುಜರಾತ್ ಟೈಟಾನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3ನೇ ಬಾರಿಗೆ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (Punjab Kings) ತಂಡಗಳೂ ಪ್ಲೇ ಆಫ್ ಪ್ರವೇಶಿಸಿದವು. ಇನ್ನೂ 10ನೇ ಬಾರಿಗೆ ಐಪಿಎಲ್ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಮೇ 18ರೊಂದಿಗೆ ಹೊಂದಿದ್ದ ನಂಟನ್ನು ಮುಂದುವರಿಸಿದೆ.
18ರ ಜೊತೆಗೆ ಏಕೆ ವಿಶೇಷ ನಂಟು?
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿಗೆ ಮೊದಲ ಬಾರಿ 18ರ ನಂಟು ಶುರುವಾಗಿದ್ದು 2013ರಲ್ಲಿ. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ (Virat Kohli) ಆ ಪಂದ್ಯದಲ್ಲಿ 29 ಎಸೆತಗಳಲ್ಲಿ ಅಜೇಯ 56 ರನ್ ಸಿಡಿಸಿ ಅಬ್ಬರಿಸಿದ್ದರು. ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ದರು.
ಇದರೊಂದಿಗೆ 2016ರ ಮೇ 18ರಂದು ಕಿಂಗ್ಸ್ ಪಜಾಬ್ ವಿರುದ್ಧ, 2023ರ ಮೇ 18ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. 2024ರ ಮೇ 18ರಂದಲೇ ಸಿಎಸ್‌ಕೆ ವಿರುದ್ಧ ನಾಕೌಟ್ ಕದನದಲ್ಲಿ ಗೆದ್ದು 18ರ ನಂಟು ಮುಂದುವರಿಸಿತ್ತು. ಇದೀಗ 2025ರ ಐಪಿಎಲ್ ಆವೃತ್ತಿಯಲ್ಲೇ ಮೇ 18ರಂದೇ ಪ್ಲೇ ಆಫ್ ಪ್ರವೇಶಿಸಿದ್ದು, 18ರ ನಂಟು ಮುಂದುವರಿಸಿದೆ.
ಈ ಆವೃತ್ತಿ ವಿಶೇಷ ಏಕೆ?
ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿಯ ಆವೃತ್ತಿಯ ಅತ್ಯಂತ ವಿಶೇಷವೆನ್ನಿಸಿದೆ. ಏಕೆಂದರೆ ಪ್ರಸಕ್ತ ನಡೆಯುತ್ತಿರುವುದು 18ನೇ ಆವೃತ್ತಿಯ ಐಪಿಎಲ್, ಆರ್‌ಸಿಬಿ ಅಭಿಮಾನಿಗಳ ಕೋಟೆ ಕಟ್ಟಿದ ಕೊಹ್ಲಿ ಜೆರ್ಸಿ ಸಂಖ್ಯೆಯೂ 18, ಮೇ 18ರಂದೇ ಪ್ಲೇ ಆಫ್ ಪ್ರವೇಶಿಸಿದೆ. ಹೀಗಾಗಿ ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕಿಂಗ್ ಕೊಹ್ಲಿ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳ ಮುಖ್ಯ ಆಕರ್ಷಣೆಯಾಗಲಿದ್ದಾರೆ.
ಕೊಹ್ಲಿ ಮೇ 18ರಂದು ನೀಡಿರುವ ಬ್ಯಾಟಿಂಗ್ ಪ್ರದರ್ಶನ:
56* (29) – ಸಿಎಸ್‌ಕೆ ವಿರುದ್ಧ 2013ರಲ್ಲಿ (ಆರ್‌ಸಿಬಿಗೆ ಜಯ)
27 (29) – ಸಿಎಸ್‌ಕೆ ವಿರುದ್ಧ 2014ರಲ್ಲಿ (ಆರ್‌ಸಿಬಿಗೆ ಜಯ)
113 (50) – ಪಂಜಾಬ್ ಕಿಂಗ್ಸ್ ವಿರುದ್ಧ 2016ರಲ್ಲಿ (ಆರ್‌ಸಿಬಿಗೆ ಜಯ)
100 (63) – ಎಸ್‌ಆರ್‌ಎಚ್ ವಿರುದ್ಧ 2023ರಲ್ಲಿ (ಆರ್‌ಸಿಬಿಗೆ ಜಯ)
47 (29) – ಸಿಎಸ್‌ಕೆ ವಿರುದ್ಧ 2024ರಲ್ಲಿ (ಆರ್‌ಸಿಬಿಗೆ ಜಯ)
18ನೇ ಆವೃತ್ತಿಯ ಐಪಿಎಲ್ – 10ನೇ ಬಾರಿಗೆ ಪ್ಲೇ ಆಫ್ ಪ್ರವೇಶ
ಚಿನ್ನಸ್ವಾಮಿ ಅಂಗಳದಲ್ಲಿ ನಿರಾಸೆ:
ಮೇ 17ರಂದು ನಿಗದಿಯಾಗಿದ್ದ ಪಂದ್ಯ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿತ್ತು. ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಳಿಕ ಕೊಹ್ಲಿ ಆಡಲಿದ್ದ ಮೊದಲ ಪಂದ್ಯ ಅದಾಗಿತ್ತು. ಕೊಹ್ಲಿಯ ಸಾವಿರಾರು ಅಭಿಮಾನಿಗಳು ಸಹ ನಂ.18ರ ಬಿಳಿ ಜೆರ್ಸಿ ಧರಿಸಿ ವಿಶೇಷ ಗೌರವ ಸಲ್ಲಿಸಲು ಕಾದುಕುಳಿತಿದ್ದರು. ಆದ್ರೆ ಅಭಿಮಾನಿಗಳ ಆಸೆಗೆ ಮಳೆ ತಣ್ಣೀರು ಎರಚಿತ್ತು.