ಲಕ್ನೋ: ಸುನೀಲ್ ನರೇನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 98 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇ-ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ತವರಿನಲ್ಲೇ ಲಕ್ನೋ ಸೋಲನುಭವಿಸಿತು. ಟಾಸ್ ಗೆದ್ದ ರಾಹುಲ್ ಪಡೆ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 235 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಲಕ್ನೋ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಗಿ ಸೋತಿತು.
Advertisement
ಲಕ್ನೋ ಪರ ಯಾವೊಬ್ಬ ಬ್ಯಾಟರ್ ಕೂಡ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾದರು. ನಾಯಕ ಕೆ.ಎಲ್.ರಾಹುಲ್ (25), ಮಾರ್ಕಸ್ ಸ್ಟೊಯಿನಿಸ್ (36), ಆಯುಷ್ ಬದೋನಿ (15), ಆಷ್ಟನ್ ಟರ್ನರ್ (16) ಗಳಿಸಿದರು. ಉಳಿದ ಬ್ಯಾಟರ್‌ಗಳು ಕೂಡ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದರು.
Advertisement
ರಾಹುಲ್ ಪಡೆಯನ್ನು ಕಟ್ಟಿ ಹಾಕುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾದರು. ಕೆಕೆಆರ್ ಪರ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಆಂಡ್ರೆ ರಸೆಲ್ 2, ಮಿಚೆಲ್ ಸ್ಟಾರ್ಕ್ ಹಾಗೂ ಸುನಿಲ್ ನರೇನ್ ತಲಾ 1 ವಿಕೆಟ್ ಕಿತ್ತರು.
Advertisement
ಇದಕ್ಕೂ ಮೊದಲು ಕೆಕೆಆರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ಸುನೀಲ್ ನರೇನ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಹೊಡಿಬಡಿ ಆಟವಾಡಿದ ಜೋಡಿ 26 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು. ಸಾಲ್ಟ್ 14 ಬಾಲ್‌ಗೆ 32 ರನ್ ಗಳಿಸಿದರು.
Advertisement
ನಂತರ ನರೇನ್‌ಗೆ ಆಂಗ್ಕ್ರಿಶ್ ರಘುವಂಶಿ (32) ಜೊತೆಯಾಗಿ ಉತ್ತಮ ರನ್ ಕಲೆಹಾಕಲು ಸಾಥ್ ನೀಡಿದರು. ಈ ಜೋಡಿ 46 ಬಾಲ್‌ಗೆ 79 ರನ್‌ಗಳ ಜೊತೆಯಾಟವಾಡಿತು.
ನರೇನ್ ಬಿರುಸಿನ ಆಟ
ಕೆಕೆಆರ್ ಪರ ಬಿರುಸಿನ ಆಟವಾಡಿದ ನರೇನ್ ಕೇವಲ 39 ಬಾಲ್‌ಗಳಿಗೆ 81 ರನ್ (6 ಫೋರ್, 7 ಸಿಕ್ಸರ್) ಚಚ್ಚಿದರು. ನಾಯಕ ಶ್ರೇಯರ್ ಐಯ್ಯರ್ 23, ರಮಣದೀಪ್ ಸಿಂಗ್ 25 ರನ್‌ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಇತ್ತ ಲಕ್ನೋ ಪರ ನವೀನ್-ಉಲ್-ಹಕ್ 3, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ಧವೀರ್ ಸಿಂಗ್ ತಲಾ 1 ವಿಕೆಟ್ ಕಿತ್ತರು.