ಲಕ್ನೋ: ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ಭಾರೀ ನಿರಾಸೆಯಾಗಿದೆ. ಮಳೆಯಿಂದಾಗಿ (Rain) ಪಂದ್ಯ ರದ್ದಾದ ಕಾರಣ ಇತ್ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಉಳಿದುಕೊಂಡಿವೆ.
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದೆ ಅಲ್ಪ ಮೊತ್ತ ಗಳಿಸುವಷ್ಟಕ್ಕೆ ಸೀಮಿತವಾಯಿತು. ಇದನ್ನೂ ಓದಿ: ಲಕ್ನೋಗೆ ಡಬಲ್ ಶಾಕ್ – ಕೆ.ಎಲ್ ರಾಹುಲ್ IPL ಟೂರ್ನಿಯಿಂದಲೇ ಔಟ್?
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಯುವ ಆಟಗಾರ ಆಯುಷ್ ಬದೋನಿ (Ayush Badoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದರು. ಕೊನೆಯ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡ ಗೌರವಯುತ ಮೊತ್ತ ಗಳಿಸಲು ಕಾರಣವಾದರು. 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಲಕ್ನೋ 125 ರನ್ ಗಳಿಸಿತ್ತು. ಇನ್ನೂ 4 ಎಸೆತಗಳು ಬಾಕಿಯಿರುವಾಗಾಲೇ ಮಳೆ ಕಾಟ ಶುರುವಾಯಿತು. ಎಡಬಿಡದೇ ಮಳೆ ಸುರಿಯುತ್ತಿದ್ದರಿಂದ ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಯಿತು.
ಲಕ್ನೋ ಪರ ಆಯುಷ್ ಬದೋನಿ 33 ಎಸೆತಗಳಲ್ಲಿ ಸ್ಫೋಟಕ 59 ರನ್ (4 ಸಿಕ್ಸರ್, 2 ಬೌಂಡರಿ) ಸಿಡಿಸಿದರೆ, ನಿಧಾನಗತಿ ಬ್ಯಾಟಿಂಗ್ ಮಾಡಿದ ನಿಕೋಲಸ್ ಪೂರನ್ (Nicholas Pooran) 20 ರನ್ ಕೊಡುಗೆ ನೀಡಿದರು. ಇದನ್ನೂ ಓದಿ: ಪಾಂಡ್ಯ ಹೋರಾಟ ವ್ಯರ್ಥ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್ ರೋಚಕ ಜಯ
ಚೆನ್ನೈ ಸೂಪರ್ ಕಿಂಗ್ಸ್ ಪರ ಮೊಯಿನ್ ಅಲಿ, ಮಹೀಶ್ ತೀಕ್ಷಣ ಹಾಗೂ ಮಹೇಶ್ ಪತಿರಣ ತಲಾ ಎರಡು ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
9 ಪಂದ್ಯಗಳಲ್ಲಿ ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇಂದು ಚೆನ್ನೈ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿತ್ತು. ಆದರೆ ಮಳೆಯಿಂದಾಗಿ ಇತ್ತಂಡಗಳಿಯೂ ನಿರಾಸೆಯಾಗಿದೆ.