ಭರತ್ ವರ್ಷ (Bharath Varsha) ನಿರ್ದೇಶನದ ‘ಇಂಟರ್ವಲ್’ (Interval) ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ಇದು ಹೊಸತನ ತುಂಬಿರುವ ಸಿನಿಮಾ ಮಾತ್ರವಲ್ಲ, ಹೊಸಬರೇ ತುಂಬಿಕೊಂಡಿರುವ ಚಿತ್ರವು ಹೌದು. ಸಿನಿಮಾ ಕನಸಿಟ್ಟುಕೊಂಡು, ಅದನ್ನು ನನಸಾಗಿಸಿಕೊಳ್ಳೋದು ಅದೆಷ್ಟು ಕಷ್ಟದ ಸಂಗತಿ ಅನ್ನೋ ವಿಚಾರ ನಿರ್ದೇಶಕರಿಗೆ ಸ್ಪಷ್ಟವಾಗಿ ಅರಿವಿದೆ. ಈ ಕಾರಣದಿಂದಲೇ ತಮ್ಮ ಮೊದಲ ಹೆಜ್ಜೆಯಂಥ ‘ಇಂಟರ್ವಲ್’ ಸಿನಿಮಾದ ನಾನಾ ವಿಭಾಗಗಳಲ್ಲಿ ಒಂದಷ್ಟು ಹೊಸ ಪ್ರತಿಭಾನ್ವಿತರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಇದರ ಫಲವಾಗಿಯೇ ಈ ಸಿನಿಮಾದ ನಾಯಕಿಯರಲ್ಲೊಬ್ಬರಾಗಿ ಸಹನಾ (Sahana) ನಟಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಾಯಕಿಯ ಆಗಮನವಾಗಿದೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!
‘ಇಂಟರ್ವಲ್’ ಫ್ಯಾಮಿಲಿ ಕಾಮಿಡಿ ಡ್ರಾಮಾ ಜಾನರಿಗೊಳಪಡುವ ಚಿತ್ರ. ಇದರಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸ ಅರಸಿ ಹೊರಡುವ ಮಧ್ಯಮ ವರ್ಗದ ಹುಡುಗರ ಕಥನವಿದೆ. ಇದರೊಂದಿಗೆ ಪ್ರಸ್ತುತ ಸಮಾಜದ ನಾನಾ ವಿಚಾರಗಳ ಬಗ್ಗೆ ಮನಮುಟ್ಟುವಂತೆ ಚಿತ್ರಿಸಲಾಗಿರೋ ಸೂಚನೆ ಈಗಾಗಲೇ ಸಿಕ್ಕಿದೆ. ಅದರ ಜೊತೆಗೆ ಬೇರೆ ಬೇರೆ ವಾತಾವರಣದ ಹೆಣ್ಣುಮಕ್ಕಳ ಮನಃಸ್ಥಿತಿಯನ್ನೂ ಕೂಡ ಕೆಲ ಪಾತ್ರಗಳ ಮೂಲಕ ಅನಾವರಣಗೊಳಿಸಲಾಗಿದೆ. ಅದರ ಭಾಗವಾಗಿ ಸಹನಾ ಈ ಸಿನಿಮಾದ ನಾಯಕಿಯರಲ್ಲೊಬ್ಬರಾಗಿ ಹಳ್ಳಿ ಶೇಡಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಮೂಲಕ ನಟಿಯಾಗಬೇಕೆಂಬ ಕನಸಿನೊಂದಿಗೆ, ಒಂದಷ್ಟು ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದ ಸಹನಾ ಪಾಲಿಗೆ ಚೆಂದದ ಅವಕಾಶ ‘ಇಂಟರ್ವಲ್’ ಮೂಲಕ ಕೂಡಿ ಬಂದಂತಾಗಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!
View this post on Instagram
‘ಇಂಟರ್ವಲ್’ ಚಿತ್ರದ ಈ ಪಾತ್ರಕ್ಕಾಗಿ ಸಹನಾ ಆಯ್ಕೆಯಾಗಿರೋದು ಆಡಿಷನ್ ಮೂಲಕ. ಒಟ್ಟಾರೆ ಕಥೆ ಮತ್ತು ತಮ್ಮ ಪಾತ್ರದ ಚಹರೆ ಕಂಡು ಥ್ರಿಲ್ ಆಗಿದ್ದ ಸಹನಾ, ಹಳ್ಳಿ ಹುಡುಗಿಯ ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬಿದ ಖುಷಿ ಹೊಂದಿದ್ದಾರೆ. ಈ ಪಾತ್ರದ ಮೂಲಕ ನಟಿಯಾಗಿ ತನ್ನ ವೃತ್ತಿ ಬದುಕಿಗೆ ಹೊಸ ತಿರುವು ಸಿಗುವ ನಿರೀಕ್ಷೆ ಹೊಂದಿದ್ದಾರೆ. ಪ್ರೀತಿ ಮತ್ತು ಮುಗ್ಧತೆಯನ್ನು ಜೀವಾಳವಾಗಿಸಿಕೊಂಡಿರೋ ಇಂಟರ್ವಲ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ಸಹನಾ ತಿಪಟೂರು ಅರಸೀಕೆರೆ ನಡುಭಾಗದಲ್ಲಿರೋ ಹನಿಕೆರೆ ಮೂಲದವರು. ತಾತ ಹಾಗೂ ತಂದೆ ಮೂಡಲಪಾಯ ಶೈಲಿಯ ಯಕ್ಷಗಾನ ಕಲಾವಿದರಾದ್ದರಿಂದ ಕಲೆಯ ಸೆಳೆತ ಚಿಕ್ಕಂದಿನಿಂದಲೇ ಅವರನ್ನು ಆವರಿಸಿಕೊಂಡಿತ್ತು.
ಇಂಜಿನಿಯರಿಂಗ್ ಪದವಿ ಪಡೆದ ನಂತರ ಒಂದೊಳ್ಳೆ ಕೆಲಸ ಹಿಡಿದು ಸೆಟಲ್ ಆಗೋ ಅವಕಾಶವಿದ್ದರೂ ಕೂಡ ಸಹನಾ ನಟಿಯಾಗಬೇಕೆಂಬ ಕನಸಿನ ಚುಂಗು ಹಿಡಿದು ಹೊರಟಿದ್ದರು. ನಂತರ ಒಂದಷ್ಟು ಸೀರಿಯಲ್‌ಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅನುಭವ ದಕ್ಕಿಸಿಕೊಂಡಿದ್ದರು. ಇದೀಗ ಇಂಟರ್ವಲ್ ಮೂಲಕ ಆಕೆ ನಾಯಕಿಯಾಗಿ ಆಗಮಿಸಿದ್ದಾರೆ. ‘ಸತ್ಯ’ ಸೀರಿಯಲ್‌ನ ಬಾಲಾ ಪಾತ್ರಧಾರಿ ಶಶಿರಾಜ್ (Shashi Raj) ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಕಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್‌ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಖಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಈ ಒಟ್ಟಾರೆ ಕಥನ, ಪಾತ್ರವರ್ಗ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ಈ ಕಾರಣದಿಂದಲೇ ಎಲ್ಲ ಸವಾಲುಗಳನ್ನು ಮೀರಿಕೊಂಡು ಇಪ್ಪತೈದು ದಿನಗಳನ್ನು ಪೂರೈಸಿಕೊಂಡಿರುವ ‘ಇಂಟರ್ವಲ್’ ಚಿತ್ರಮಂದಿರಲ್ಲಿದಲ್ಲಿ ಮುನ್ನುಗ್ಗುತ್ತಿದೆ.