– ಜಿಪಿಯು ದೋಷದಿಂದ ಕಾಣಿಸಿಕೊಂಡ ಸಮಸ್ಯೆ
ನವದೆಹಲಿ: ವಡೋದರಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದೊಳಗೆ (Vadodara Delhi flight) ಉಂಟಾದ ವಿದ್ಯುತ್ ವ್ಯತ್ಯಯದಿಂದ ಪ್ರಯಾಣಿಕರು 30 ನಿಮಿಷಗಳ ಕಾಲ ಎಸಿ, ಬೆಳಕು ಇಲ್ಲದೇ ಪರದಾಡಿದ್ದಾರೆ. ಪರಿಣಾಮ ವಿಮಾನವು ನಿಗದಿತ ಸಮಯಕ್ಕಿಂತ 80 ನಿಮಿಷ ತಡವಾಗಿ ಟೇಕಾಫ್ ಆಗಿದೆ.
Power failure on IndiGo 6E 657 at Vadodara Airport: Passengers stuck without AC, lights or ventilation for ~30 mins on ground.
Chaos inside! pic.twitter.com/6rrlXg2JhX
— Ghar Ke Kalesh (@gharkekalesh) May 18, 2026
ಭಾನುವಾರ ರಾತ್ರಿ ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ 6E-657 ವಿಮಾನ (IndiGo) ರಾತ್ರಿ 8.40ಕ್ಕೆ ಟೇಕ್ ಆಫ್ ಆಗುವ ಮುನ್ನ ವಿಮಾನ ನೆಲದ ವಿದ್ಯುತ್ ಘಟಕಕ್ಕೆ (ಗ್ರೌಂಡ್ ಪವರ್ ಯುನಿಟ್- GPU) ಸಂಪರ್ಕಗೊಂಡಿತ್ತು. ಈ ವೇಳೆ ಜಿಪಿಯು ಏಕಾಏಕಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಿಂದ ವಿಮಾನದ ಒಳಗಡೆ ವಿದ್ಯುತ್ ಸಂಪರ್ಕ ಕಡಿಗೊಂಡು ಕತ್ತಲಾಗಿತ್ತು. ಎಸಿ ಕೂಡ ಸ್ಥಗಿತಗೊಂಡಿತ್ತು.
ವಿಮಾನದ ಒಳಗಿದ್ದ 160 ಪ್ರಯಾಣಿಕರು (IndiGo Passengers) ಸೆಕೆಯಿಂದ ಕತ್ತಲಲ್ಲೇ ಅರ್ಧ ಗಂಟೆಗಳ ಕಾಲ ಪರದಾಡಿದರು. ಎಸಿ ಕೆಲಸ ಮಾಡದೇ ಇದ್ದ ಕಾರಣ ಕ್ಯಾಬಿನ್ ಒಳಗೆ ಬಿಸಿಯ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಬೆವತು ಸುಸ್ತಾಗಿದ್ದರು. ತಾಂತ್ರಿಕ ದೋಷ ಸರಿಪಡಿಸಲು ಎಂಜಿನಿಯರ್‌ಗಳು ತಕ್ಷಣ ವಿಮಾನವಿದ್ದ ಸ್ಥಳಕ್ಕೆ ಧಾವಿಸಿದರು. 30 ನಿಮಿಷಗಳ ನಂತರ ಜಿಪಿಯು ಕಾರ್ಯನಿರ್ವಹಿಸತೊಡಗಿತು.

ಜಿಪಿಯು ಅಥವಾ ನೆಲದ ವಿದ್ಯುತ್ ಘಟಕ ಎಂದರೇನು?
ನೆಲದ ವಿದ್ಯುತ್ ಘಟಕವು ವಿಮಾನ ನಿಲುಗಡೆಗೊಂಡಿರುವ ವೇಳೆ ಬೆಳಕು, ಹವಾನಿಯಂತ್ರಣ ಸೇರಿದಂತೆ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಸುವ ಸಾಧನವಾಗಿದೆ. ಈ ಘಟಕದಲ್ಲಿ ದೋಷ ಕಾಣಿಸಿಕೊಂಡ ಕಾರಣ ಸೇವೆಗಳು ಸ್ಥಗಿತಗೊಂಡಿದ್ದವು. ಬಳಿಕ ತಾಂತ್ರಿಕ ತಂಡ ಸಮಸ್ಯೆ ಸರಿಪಡಿಸಿದ ನಂತರ ವಿಮಾನ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿತು.
ಇದಕ್ಕೂ ಮೊದಲು, ಇದೇ ತಿಂಗಳ ಆರಂಭದಲ್ಲಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿತ್ತು. ಹೈದರಾಬಾದ್‌ನಿಂದ ಬಂದಿದ್ದ ವಿಮಾನದಲ್ಲಿ ಸೀಟ್ ಪಾಕೆಟ್‌ನಲ್ಲಿದ್ದ ಪವರ್ ಬ್ಯಾಂಕ್‌ಗೆ ಬೆಂಕಿ ಕಾಣಿಸಿಕೊಂಡು ಕ್ಯಾಬಿನ್ ಹೊಗೆಯಿಂದ ತುಂಬಿತ್ತು. ವಿಮಾನದಲ್ಲಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.

