ಲಕ್ನೋ: ಪಾಟ್ನಾದಿಂದ ಲಕ್ನೋಗೆ (Lucknow) ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ (IndiGo Flight) ಸಿಡಿಲು ಬಡಿದು (Lightning), ಮೂತಿ ಜಖಂಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
104 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನ 17,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಸಿಡಿಲು ಬಡಿದಿದೆ. ಕೂಡಲೇ ಲಕ್ನೋದಲ್ಲಿ ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚಿತವಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಹಿಂಭಾಗ ರನ್ವೇಗೆ ಡಿಕ್ಕಿ – ತಪ್ಪಿದ ಭಾರೀ ಅನಾಹುತ
ಈ ಘಟನೆ ಬಗ್ಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ‘ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್’ (DGCA) ತನಿಖೆಯನ್ನು ಪ್ರಾರಂಭಿಸಿದೆ. ನಿಯಂತ್ರಕ ಸಂಸ್ಥೆಯ ಅನುಮೋದನೆ ಸಿಕ್ಕ ನಂತರವಷ್ಟೇ ವಿಮಾನವು ಮತ್ತೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರರು, ಹಾರಾಟದಲ್ಲಿದ್ದ 6E 625 ವಿಮಾನ ಇಳಿಯುವಾಗ ಆಲಿಕಲ್ಲು ಮಳೆಯಂತಹ ಪ್ರತಿಕೂಲ ಹವಾಮಾನವನ್ನು ಎದುರಿಸಿತು. ಇದರಿಂದಾಗಿ ವಿಮಾನದ ಮುಂಭಾಗದ ರೇಡೋಮ್ಗೆ (ರೇಡಾರ್ ಕವರ್) ಹಾನಿಯಾಯಿತು. ಇದರ ಹೊರತಾಗಿಯೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು ಅವರು ತೆರಳಬೇಕಾಗಿದ್ದ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ವಿಮಾನಕ್ಕೆ ಅಗತ್ಯವಾದ ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲಾಗುವುದು ಮತ್ತು ಸಂಬಂಧಿತ ಅನುಮೋದನೆಗಳನ್ನು ಪಡೆದ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಹಿಂಭಾಗದ ಭಾಗವು ರನ್ವೇಗೆ ತಗುಲಿತ್ತು. ಬಳಿಕ ವಿಮಾನವನ್ನು ಹಾರಾಟದಿಂದ ತಡೆಹಿಡಿಯಲಾಗಿತ್ತು. ಈ ಘಟನೆಗೆ ಕೆಟ್ಟ ಹವಾಮಾನವೇ ಕಾರಣ ಎಂದು ಇಂಡಿಗೋ ತಿಳಿಸಿತ್ತು. ಇದನ್ನೂ ಓದಿ: ತಾಂತ್ರಿಕ ದೋಷ: ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ಲಂಡನ್ಗೆ ವಾಪಸ್


