ಅಹಮದಾಬಾದ್: ಸಂಜು ಸ್ಯಾಮ್ಸನ್ (Sanju Samson), ಶಿಮ್ರಾನ್ ಹೆಟ್ಮೇಯರ್ (Shimron Hetmyer) ಸಿಕ್ಸರ್, ಬೌಂಡರಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಮೊದಲ 10 ಓವರ್‌ಗಳಲ್ಲಿ ಕೇವಲ 53 ರನ್ ಗಳಿಸಿದ್ದ ರಾಜಸ್ಥಾನ್ (Rajasthan Royals) ತಂಡ ಮುಂದಿನ 56 ಎಸೆತಗಳಲ್ಲಿ ಬರೋಬ್ಬರಿ 126 ರನ್ ಸಿಡಿಸಿತು. ಕೊನೆಯ 6 ಓವರ್‌ಗಳಲ್ಲಿ ತಂಡದ ಗೆಲುವಿಗೆ 64 ರನ್‌ಗಳ ಅಗತ್ಯವಿತ್ತು. ಈ ವೇಳೆ 15ನೇ ಓವರ್‌ನಲ್ಲಿ 13 ರನ್, 16ನೇ ಓವರ್‌ನಲ್ಲಿ 20 ರನ್, 17ನೇ ಓವರ್‌ನಲ್ಲಿ 8 ರನ್, 18ನೇ ಓವರ್‌ನಲ್ಲಿ 13 ರನ್ ಹಾಗೂ 19ನೇ ಓವರ್‌ನಲ್ಲಿ 16 ರನ್ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ಮೊದಲ ಎಸೆತದಲ್ಲಿ 2 ರನ್ ಕದ್ದ ಹೆಟ್ಮೇಯರ್ ರನೌಟ್‌ನಿಂದ ಪಾರಾದರು. 2ನೇ ಎಸೆತದಲ್ಲೇ ಸಿಕ್ಸರ್ ಚಚ್ಚಿ ತಂಡ ರೋಚಕ ಜಯ ಸಾಧಿಸಲು ಕಾರಣವಾದರು.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ 19.2 ಓವರ್‌ಗಳಲ್ಲೇ 179 ರನ್ ಗಳಿಸಿ ಗುಜರಾತ್ ತವರಿನಲ್ಲೇ ಗೆದ್ದು ಬೀಗಿತು. ಇದನ್ನೂ ಓದಿ: IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್ ತೆಂಡೂಲ್ಕರ್ ಪುತ್ರ
Advertisement
Advertisement
ಚೇಸಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ 1 ರನ್ ಗಳಿಸಿದರೆ, ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಇದರಿಂದ ಮೊದಲ 6 ಓವರ್‌ಗಳಲ್ಲಿ ಕೇವಲ 26 ರನ್ ಕಲೆಹಾಕಿತ್ತು. 3ನೇ ಕ್ರಮಾಂಕದಲ್ಲಿ ಬಂದ ದೇವದತ್ ಪಡಿಕಲ್ ಕೂಡ 25 ಎಸೆತಗಳಲ್ಲಿ 26 ರನ್, ರಿಯಾನ್ ಪರಾಗ್ 5 ರನ್ ಗಳಿಸಿ ಔಟಾದರು. ಇದರಿಂದ ತಂಡಕ್ಕೆ ಬಹುತೇಕ ಸೋಲು ಖಚಿತವಾಗಿತ್ತು.
ಮಧ್ಯಮ ಕ್ರಮಾಂಕದಲ್ಲಿ ಒಂದಾದ ಶಿಮ್ರಾನ್ ಹೆಟ್ಮೇಯರ್ ಹಾಗೂ ಸಂಜು ಸ್ಯಾಮನ್ ಭರ್ಜರಿ ಬ್ಯಾಟಿಂಗ್ ನಡೆದರು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ಉತ್ತಮ ರನ್ ಕಲೆಹಾಕಿದರು. 13ನೇ ಓವರ್‌ನಲ್ಲಿ ರಶೀದ್‌ಖಾನ್ ಬೌಲಿಂಗ್‌ಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಸಂಜು ಸ್ಯಾಮ್ಸನ್ ಒಂದೇ ಓವರ್‌ನಲ್ಲಿ 20 ರನ್ ಚಚ್ಚಿದರು. ಆ ನಂತರ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. 32 ಎಸೆತಗಳನ್ನು ಎದುರಿಸಿದ ಸಂಜು ಬರೋಬ್ಬರಿ 6 ಸಿಕ್ಸರ್, 3 ಬೌಂಡರಿಗಳೊಂದಿಗೆ 60 ರನ್ ಗಳಿಸಿದರು. ಈ ವೇಳೆ ಮತ್ತೊಮ್ಮೆ ಸಿಕ್ಸರ್ ಸಿಡಿಸುವ ಬರದಲ್ಲಿ ಕ್ಯಾಚ್ ನೀಡಿದರು. ಸಂಜು ಔಟಾಗುತ್ತಿದ್ದಂತೆ ಗುಜರಾತ್ ಫ್ಯಾನ್ಸ್ ಹುಚ್ಚೆದ್ದು ಕುಣಿದರು. ಆದರೆ ತನ್ನ ಅಬ್ಬರ ನಿಲ್ಲಿಸದ ಹೆಟ್ಮೇಯರ್ ಸ್ಫೋಟಕ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.
ಕೇವಲ 25 ಎಸೆತಗಳನ್ನು ಎದುರಿಸಿದ ಹೆಟ್ಮೇಯರ್ 5 ಸಿಕ್ಸರ್, 2 ಬೌಂಡರಿಯೊಂದಿಗೆ 56 ರನ್ ಚಚ್ಚಿ ಅಜೇಯರಾಗುಳಿದರು. ಈ ನಡುವೆ ದ್ರುವ್ ಜುರೆಲ್ ಸ್ಪೋಟಕ 17 ರನ್ (10 ಎಸೆತ, 1 ಸಿಕ್ಸರ್, 2 ಬೌಂಡರಿ), ಅಶ್ವಿನ್ 3 ಎಸೆತಗಳಲ್ಲಿ 10 ರನ್ ಚಚ್ಚಿ ಔಟಾದರು. ಇದನ್ನೂ ಓದಿ: IPL 2023: ಇಶಾನ್ ಕಿಶನ್ ಶೈನ್, ಅಯ್ಯರ್ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮ್ಯಾನ್‌ಗಳು ತವರಿನಲ್ಲಿ ಪಂದ್ಯ ನಡೆದರು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲವಾದರು. ಪವರ್‌ಪ್ಲೇ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಗುಜರಾತ್ ವಿರುದ್ಧ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿದರು. ಮೊದಲ 6 ಓವರ್‌ಗಳಲ್ಲಿ ಗುಜರಾತ್ ಟೈಟಾನ್ಸ್ 42 ರನ್‌ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು.
ಆರಂಭಿಕ ಆಟಗಾರ ಶುಭಮನ್ ಗಿಲ್ 34 ಎಸೆತಗಳಲ್ಲಿ 45 ರನ್, ಮಂದಗತಿಯ ಬ್ಯಾಟಿಂಗ್ ನಡೆಸಿದ ಸಾಯಿ ಸುದರ್ಶನ್ 19 ಎಸೆತಗಳಲ್ಲಿ 20 ರನ್ ಗಳಿಸಲಷ್ಟೇ ಶಕ್ತವಾದರು. ನಾಯಕ ಹಾರ್ದಿಕ್ ಪಾಂಡ್ಯ 28 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸರ್), ಅಭಿನವ್ ಮನೋಹರ್ 27 ರನ್ (13 ಎಸೆತ, 3 ಸಿಕ್ಸರ್) ಗಳಿಸಿದರು. ಈ ನಡುವೆ ಡೇವಿಡ್ ಮಿಲ್ಲರ್ 46 ರನ್ (30 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ (1 ರನ್), ಅಲ್ಝರಿ ಜೋಸೆಫ್ ಅಜೇಯರಾಗುಳಿದರು.
ರಾಜಸ್ಥಾನ್ ರಾಯಲ್ಸ್ ಪರವಾಗಿ ಸಂದೀಪ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೋಲ್ಟ್, ಆಡಂ ಜಂಪಾ ಹಾಗೂ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.