ಮುಂಬೈ: ಇಶಾನ್ ಕಿಶನ್ (Ishan Kishan) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್‌ರೈಡರ್ಸ್ (KolkataKnight Riders) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ (KKR) 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. 186 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 17.4 ಓವರ್‌ಗಳಲ್ಲೇ 186 ರನ್ ಗಳಿಸಿ ಗೆದ್ದು ಬೀಗಿತು.
Advertisement
Advertisement
ಬೃಹತ್ ಮೊತ್ತದ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡ ಸ್ಫೋಟಕ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (Rohit Sharma) ಹಾಗೂ ಇಶಾನ್ ಕಿಶನ್ ಜೋಡಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಕೆಕೆಆರ್ ಬೌಲರ್‌ಗಳನ್ನ ಚೆಂಡಾಡಿದರು. ಮೊದಲ ವಿಕೆಟ್ ಪತನಕ್ಕೆ ಈ ಜೋಡಿ 4.5 ಓವರ್‌ಗಳಲ್ಲಿ 65 ರನ್ ಸಿಡಿಸಿತ್ತು. ಈ ವೇಳೆ ರೋಹಿತ್ ಶರ್ಮಾ 13 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೆ 25 ಎಸೆತಗಳಲ್ಲಿ ಸ್ಫೋಟಕ 58 ರನ್ (5 ಬೌಂಡರಿ, 5 ಸಿಕ್ಸರ್) ಚಚ್ಚಿದ ಇಶಾನ್ ಕಿಶನ್ ಸಹ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
Advertisement
Advertisement
ನಂತರ 3ನೇ ವಿಕೆಟ್‌ಗೆ ಜೊತೆಯಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ (Suryakumar Yadav), ತಿಲಕ್ ವರ್ಮಾ ಸಹ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ನೆರವಾದರು. ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯಕುಮಾರ್ ಯಾದವ್, ಈ ಪಂದ್ಯದಲ್ಲಿ ಉತ್ತಮ ಫಾರ್ಮ್ ಸಾಬೀತುಪಡಿಸಿದ್ರು. ಸೂರ್ಯ ಕೇವಲ 25 ಎಸೆತಗಳಲ್ಲಿ 43 ರನ್ (3 ಸಿಕ್ಸರ್, 4 ಬೌಂಡರಿ) ಗಳಿದರೆ, ತಿಲಕ್ ವರ್ಮಾ 30 ರನ್ (25 ಎಸೆತ, 1 ಸಿಕ್ಸರ್, 3 ಬೌಂಡರಿ) ಬಾರಿಸಿದರು. ಈ ನಡುವೆ ನೆಹಾಲ್ ವಧೇರಾ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಕೊನೆಯಲ್ಲಿ ಟಿಮ್ ಡೇವಿಡ್ 13 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿ ಸಹಿತ 24 ರನ್ ಚಚ್ಚಿದರೆ, ಕ್ಯಾಮರೂನ್ ಗ್ರೀನ್ 1 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಕೆಕೆಆರ್ ಪರ ಸುಯಶ್ ಸರ್ಮಾ 2 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ ಹಾಗೂ ಲಾಕಿ ಫರ್ಗುಸನ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: 9 ಸಿಕ್ಸ್, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್ ಅಯ್ಯರ್
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (Venkatesh Iyer) ಏಕಾಂಗಿ ಹೋರಾಟ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್, ನಾರಾಯಣ್ ಜಗದೀಶನ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಅಯ್ಯರ್ ಮುಂಬೈ ಬೌಲರ್‌ಗಳನ್ನ ಬೆಂಡೆತ್ತಿದರು. ಕೇವಲ 51 ಎಸೆತಗಳನ್ನು ಎದುರಿಸಿ ಸ್ಫೋಟಕ 104 ರನ್ (9 ಸಿಕ್ಸರ್, 6 ಬೌಂಡರಿ) ಸಿಡಿಸಿದರು. ವೆಂಕಟೇಶ್ ಐಯ್ಯರ್ ಸಿಡಿಸಿದ ಈ ಶತಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಳೆದ 15 ವರ್ಷಗಳಲ್ಲಿಯೇ ಮೊದಲ ಶತಕವಾಗಿದೆ. ಈ ಮೂಲಕ ಕೆಕೆಆರ್ ಫ್ರಾಂಚೈಸಿಯ ಸುದೀರ್ಘ ಕಾಲದ ಶತಕದ ಬರವನ್ನು ನೀಗಿಸಿದರು.
ನಂತರ ಕಣಕ್ಕಿಳಿದರವರಲ್ಲಿ ಯಾರೊಬ್ಬರು ಉತ್ತಮ ಪ್ರದರ್ಶನ ತೋರದೇ ಇದ್ದರಿಂದ ಕೆಕೆಆರ್ ತಂಡ 185 ರನ್‌ಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ನಿತೀಶ್ ರಾಣಾ 5 ರನ್, ಶಾರ್ದೂಲ್ ಠಾಕೂರ್ 13 ರನ್, ರಿಂಕು ಸಿಂಗ್ 18 ರನ್ ಗಳಿಸಿದ್ರೆ, ಕೊನೆಯಲ್ಲಿ ಆ್ಯಂಡ್ರೆ ರಸ್ಸೆಲ್ 21 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸರ್), ಸುನೀಲ್ ನರೇನ್ 2 ರನ್ ಗಳಿಸಿ ಅಜೇಯರಾಗುಳಿದರು.
ಇನ್ನೂ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್ ಪರ ಹೃತಿಕ್ ಶೋಕೀನ್ 2 ವಿಕೆಟ್ ಪಡೆದರೆ, ಕ್ಯಾಮರೂನ್ ಗ್ರೀನ್, ದುವಾನ್ ಜಾನ್ಸೆನ್, ಪಿಯೂಷ್ ಚಾವ್ಲಾ ಹಾಗೂ ರಿಲೇ ಮೆರೆದಿಥ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಕೋಲ್ಕತ್ತಾ ನೈಟ್‌ರೈಡರ್ಸ್ – 20 ಓವರ್ – 185/6
ಮುಂಬೈ ಇಂಡಿಯನ್ಸ್ – 17.4 ಓವರ್ – 186/5