ಮುಂಬೈ: ಅರ್ಷ್‌ದೀಪ್ ಸಿಂಗ್ (Arshdeep Singh) ಬೆಂಕಿ ಬೌಲಿಂಗ್ ದಾಳಿ ಹಾಗೂ ನಾಯಕ ಸ್ಯಾಮ್ ಕರ್ರನ್ (Sam Curran) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings), ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 13 ರನ್‌ಗಳ ಜಯ ಸಾಧಿಸಿದೆ.
ಕೊನೆಯ 6 ಎಸೆತಗಳಲ್ಲಿ ಮುಂಬೈಗೆ 16 ರನ್ ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತದಲ್ಲಿ ಟಿಮ್ ಡೇವಿಡ್ 1 ರನ್ ಕದ್ದರು. ನಂತರ ಕ್ರೀಸ್‌ಗೆ ಬಂದ ತಿಲಕ್ ವರ್ಮಾ 2ನೇ ಎಸೆತದಲ್ಲಿ ರನ್ ಗಳಿಸಲು ವಿಫಲರಾಗಿ, 3ನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅರ್ಷ್‌ದೀಪ್ ಎಸೆದ ಬೌಲಿಂಗ್ ವೇಗಕ್ಕೆ ವಿಕೆಟ್ ಮುರಿದೇ ಹೋಯಿತು. 4ನೇ ಎಸೆತದಲ್ಲೂ ವಿಕೆಟ್ ಕಬಳಿಸಿದ ಅರ್ಷ್‌ದೀಪ್ ತಂಡದ ಗೆಲುವಿಗೆ ಆಸರೆಯಾದರು. 5ನೇ ಎಸೆತದಲ್ಲಿ ಯಾವುದೇ ರನ್ ನೀಡದೇ 6ನೇ ಎಸೆತದಲ್ಲಿ ಕೇವಲ ಒಂದು ರನ್ ನೀಡಿ ಪಂಜಾಬ್ ಗೆಲುವಿಗೆ ಕಾರಣರಾದರು.
Advertisement
Advertisement
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು. 215 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ತವರಿನಲ್ಲಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮದ ಮುಂದೆ ಮಂಡಿಯೂರಿದ ರಾಹುಲ್ ಪಡೆ – ಗುಜರಾತ್‌ಗೆ 7 ರನ್‌ಗಳ ರೋಚಕ ಜಯ
Advertisement
Advertisement
ರೋಹಿತ್, ಗ್ರೀನ್, ಸೂರ್ಯನ ಅಬ್ಬರ ವ್ಯರ್ಥ: ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 2ನೇ ಓವರ್‌ನಲ್ಲೇ 8 ರನ್‌ಗಳಿಗೆ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಜೊತೆಗೂಡಿದ ಕ್ಯಾಮರೂನ್ ಗ್ರೀನ್ (Cameron Green) ಹಾಗೂ ರೋಹಿತ್ ಶರ್ಮಾ (Rohit Sharma) ಜೋಡಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಭರ್ಜರಿ ಸಿಕ್ಸರ್ ಬೌಂಡರಿ ಆಟವಾಡಿದ ಈ ಜೋಡಿ 50 ಎಸೆತಗಳಲ್ಲಿ 76 ರನ್ ಸಿಡಿಸಿತ್ತು. ಅತ್ತ ರೋಹಿತ್ ಶರ್ಮಾ 44 ರನ್ (27 ಎಸೆತ, 4 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟಾಗುತ್ತಿದ್ದಂತೆ, ಪಂಜಾಬ್ ಬೌಲರ್‌ಗಳನ್ನ ಚೆಂಡಾಡಿದ ಗ್ರೀನ್, ಸೂರ್ಯಕುಮಾರ್ ಯಾದವ್ (Suryakumar Yadav) ಜೋಡಿ, 36 ಎಸೆತಗಳಲ್ಲಿ ಬರೋಬ್ಬರಿ 75 ರನ್ ಸಿಡಿಸಿತು. ಇದು ತಂಡದ ಗೆಲುವಿಗೆ ಹೆಚ್ಚು ಸಹಕಾರಿಯಾಯಿತು. ಕ್ಯಾಮರೂನ್ ಗ್ರೀನ್ 67 ರನ್ (43 ಎಸೆತ, 6 ಬೌಂಡರಿ, 3 ಸಿಕ್ಸರ್) ಗಳಿಸಿದರೆ, 219.23 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 57 ರನ್ ಸಿಡಿಸಿ ಮಿಂಚಿದರು.
ಇದರಿಂದ ಮುಂಬೈ ತಂಡ ಖಚಿತವಾಗಿ ಗೆಲ್ಲುವ ಭರವಸೆ ಹೊಂದಿತ್ತು. ಆದರೆ ಕೊನೆಯಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ವಿಫಲತೆಯಿಂದ ಮುಂಬೈ ಇಂಡಿಯನ್ಸ್‌ಗೆ ವಿರೋಚಿತ ಸೋಲಾಯಿತು. ಕೊನೆಯಲ್ಲಿ 192.30 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಟಿಮ್ ಡೇವಿಡ್ 13 ಎಸೆತಗಳಲ್ಲಿ 25 ರನ್ ಗಳಿಸಿದರೆ, ಜೋಫ್ರಾ ಆರ್ಚರ್ 1 ರನ್ ಗಳಿಸಿ ಅಜೇಯರಾಗುಳಿದರು. ತಿಲಕ್ ವರ್ಮಾ 3 ರನ್ ಗಳಿಸಿ ಔಟಾದರು.
ಪಂಜಾಬ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಷ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 29 ರನ್ ನೀಡಿ ಪ್ರಮುಖ 4 ವಿಕೆಟ್ ಕಿತ್ತರೆ, ನಾಥನ್ ಎಲ್ಲಿಸ್ ಹಾಗೂ ಲಿಯಾಮ್ ಲಿವಿಂಗ್ಸ್ಟನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: 7 ಸಾವಿರ ರನ್ ಪೂರೈಸಿದ ರಾಹುಲ್ – ಕೊಹ್ಲಿ, ರೋಹಿತ್ ಸೇರಿ ಹಲವರ ದಾಖಲೆ ಉಡೀಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಪಂಜಾಬ್ ಆರಂಭದಲ್ಲಿ ಮುಂಬೈ ಬೌಲರ್‌ಗಳ ದಾಳಿಗೆ ತುತ್ತಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸ್ವರೂಪ ರೌದ್ರಾವತಾರ ತಾಳಿತು. ಆದರೆ ಕೊನೆಯ 6 ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡ ಮುಂಬೈಗೆ 215 ರನ್‌ಗಳ ಬೃಹತ್ ಮೊತ್ತದ ಗುರಿ ನೀಡುವಲ್ಲಿ ಯಶಸ್ವಿಯಾಯಿತು.
ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಈ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಿ ನಾಯಕ ಸ್ಯಾಮ್ ಕರ್ರನ್ 29 ಎಸೆತಗಳಲ್ಲಿ 55 ರನ್ (4 ಸಿಕ್ಸರ್, 5 ಬೌಂಡರಿ) ಬಾರಿಸಿದ ದೊಡ್ಡ ಮೊತ್ತದತ್ತ ದಾಪುಗಾಲಿಕ್ಕಲು ಕಾರಣವಾದರು. ಇದರೊಂದಿಗೆ ಹರ್ಪ್ರೀತ್ ಸಿಂಗ್ ಭಾಟಿಯಾ 28 ಎಸೆತಗಳಲ್ಲಿ 41 ರನ್ (2 ಸಿಕ್ಸರ್, 4 ಬೌಂಡರಿ) ಬಾರಿಸಿದರೆ ಜಿತೇಶ್ ಶರ್ಮಾ ಕೇವಲ 7 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ನೊಂದಿಗೆ 25 ರನ್ ಚಚ್ಚಿದರು.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ 6 ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿಕೊಂಡಿತು. ಮೊದಲ 14 ಓವರ್‌ಗಳ ಅಂತ್ಯಕ್ಕೆ 105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ 150 ರನ್‌ಗಳ ಗುರಿ ತಲುಪುವುದೇ ಕಷ್ಟವಾಗಿತ್ತು. ಮುಂಬೈ ತವರಿನಲ್ಲಿ ಪಂಜಾಬ್ ಸುಲಭ ಗುರಿ ಮುಂದಿಡಲಿದೆ ಎಂದೇ ಬಹುತೇಕ ಅಭಿಮಾನಿಗಳು ಭಾವಿಸಿದ್ದರು. 15ನೇ ಓವರ್‌ನಿಂದ ಅಬ್ಬರಿಸಲು ಶುರು ಮಾಡಿದ ಪಂಜಾಬ್ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. ಅರ್ಜುನ್ ತೆಂಡೂಲ್ಕರ್ ಎಸೆತ 16ನೇ ಓವರ್‌ನಲ್ಲಿ 31 ರನ್ ಹರಿದು ಬಂದಿದ್ದರೇ ಕ್ಯಾಮರೂನ್ ಗ್ರೀನ್ ಎಸೆದ 18ನೇ ಓವರ್‌ನಲ್ಲಿ 25 ರನ್ ಹರಿದು ಬಂದಿತು. ಇದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.